×
Ad

ಮೀನುಗಾರರ ಸಂಕಷ್ಟದಲ್ಲಿ ರಾಜಕೀಯ ಸಲ್ಲದು: ಕಾಂಗ್ರೆಸ್

Update: 2019-01-05 20:12 IST

ಉಡುಪಿ, ಜ.5: ಮಲ್ಪೆ ಬಂದರಿನಿಂದ ಆಳ ಸಮುದ್ರ ಮಿನುಗಾರಿಕೆಗೆ ತೆರಳಿ ನಾಪತ್ತೆಯಾದ ಬೋಟ್ ಸಮೇತ 7 ಮೀನುಗಾರರ ರಕ್ಷಣೆಗೆ ರಾಜ್ಯ ಸರಕಾರ ನೆರವು ಕೊಟ್ಟಿಲ್ಲ ಎಂದು ಜಿಲ್ಲಾ ಬಿಜೆಪಿ ಮಾಡಿದ ಆರೋಪವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.

ಮೀನುಗಾರರು ಸಂಕಷ್ಟದಲ್ಲಿರುವಾಗ ಬಿಜೆಪಿ ಪಕ್ಷದಿಂದ ರಾಜಕೀಯ ಸರಿಯಲ್ಲ. ನಾಪತ್ತೆಯಾದ ಸುವರ್ಣ ತ್ರಿಭುಜ ದೋಣಿ ಮತ್ತು ಮೀನುಗಾರರನ್ನು ಸುರಕ್ಷಿತವಾಗಿ ಕರೆ ತರಲು ರಾಜ್ಯ ಸರಕಾರ, ಜಿಲ್ಲಾಡಳಿತ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.

12 ನಾಟಿಕಲ್ ಮೈಲ್‌ಗಳ ಒಳಗೆ ಆಯಾಯ ರಾಜ್ಯ ಸರಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ಇದು ಹೊರ ರಾಜ್ಯದಲ್ಲಿ ನಡೆದ ಘಟನೆಯಾದುದ್ದರಿಂದ ಕೇಂದ್ರ ಸರಕಾರವೇ ಸಂಪೂರ್ಣ ಹೊಣೆ ಎಂದು ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಟ್ಟಿದೆ. ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದ್ದು ಮೂರು ರಾಜ್ಯಗಳಲ್ಲೂ ಬಿಜೆಪಿ ಸರಕಾರ ಆಡಳಿತದಲ್ಲಿದೆ.

ಮೀನುಗಾರರು ಜ.6ರಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುವುದನ್ನು ಮನಗಂಡು ಬಿಜೆಪಿ ನಾಯಕರು ಸಾಕಷ್ಟು ವಿಳಂಬ ಮಾಡಿ ಕೊನೆಯ ಗಳಿಗೆಯಲ್ಲಿ ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆಯ ಸಚಿವರನ್ನು ಭೇಟಿಯಾಗಿದ್ದಾರೆ. ಮೀನುಗಾರರು ಸಂಕಷ್ಟದಲ್ಲಿರುವ ಈ ಪರಿಸ್ಥಿತಿಯಲ್ಲಿ ಎಲ್ಲಾ ಪಕ್ಷದ ನಾಯಕರು ಒಟ್ಟಾಗಿ ನಾಪತ್ತೆಯಾದ ಮೀನುಗಾರರನ್ನು ಪತ್ತೆ ಮಾಡಲು ಅಗತ್ಯವಿರುವ ಕ್ರಮ ಕೈಗೊಳ್ಳಬೇಕಾಗಿದೆ. ಅದು ಬಿಟ್ಟು ರಾಜಕೀಯ ಮಾಡುವುದನ್ನು ಬಿಜೆಪಿ ಇನ್ನಾದರೂ ನಿಲ್ಲಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News