×
Ad

'ನೂರು ವರ್ಷದ ಸಾಧನೆಗೆ ತೃಪ್ತಿಪಟ್ಟುಕೊಳ್ಳದೆ ಸ್ಥಾಪಕರ ಕನಸನ್ನು ನನಸಾಗಿಲು ಪಣ ತೊಡಬೇಕು'

Update: 2019-01-05 20:52 IST

ಭಟ್ಕಳ, ಜ. 5: ಅಂಜುಮನ್ ಸಂಸ್ಥೆಯ ನೂರು ವರ್ಷಗಳ ಸಾಧನೆ ತೃಪ್ತಿ ತಂದರೂ ಇಷ್ಟಕ್ಕೆ ಸುಮ್ಮನೆ ಕೂಡದೇ ಸಂಸ್ಥಾಪಕರು ಕಂಡ ಕನಸುಗಳನ್ನು ನನಸಾಗಿವಲ್ಲಿ ಸಂಸ್ಥೆಯ ಮುಖಂಡರು ಪಣ ತೊಡಬೇಕು ಎಂದು ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ಅಧ್ಯಕ್ಷ ಹಝರತ್ ಮೌಲಾನ ಗುಲಾಂ ಮುಹಮ್ಮದ್ ವಸ್ತಾನ್ವಿ ಕರೆ ನೀಡಿದರು.

ಅವರು ಇಲ್ಲಿನ ಅಂಜುಮನಾಬಾದ್ ಕ್ಯಾಂಪಸ್ ನಲ್ಲಿ ಏರ್ಪಡಿಸಿದ್ದ ಅಂಜುಮನ್ ಶತಮಾನೋತ್ಸವ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಸಮುದಾಯಗಳ ಅಭಿವೃದ್ಧಿಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದ್ದು ಅಂಜುಮನ್ ಸಂಸ್ಥೆ ಇಲ್ಲಿನ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಿದೆ. ಕೇವಲ ಪದವಿ ಕಾಲೇಜುಗಳಿಗೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯ ಗುರಿಯೊಂದಿಗೆ ಸಂಸ್ಥೆಯ ಮುಂದಡಿ ಇಡಬೇಕೆಂದು ಅವರು ಕರೆ ನೀಡಿದರು. ಸಮಾಜದ ಆರ್ಥಿಕತೆಯನ್ನು ಗಟ್ಟಿಗೊಳಿಸುವಲ್ಲಿ ಅಂಜುಮನ್ ಮಹತ್ತರ ಪಾತ್ರವಹಿಸಿದೆ ಎಂದ ಅವರು, ಅಂಜುಮನ್ ಶಿಕ್ಷಣ ಸಂಸ್ಥೆಗಳಿಂದ ಪಾರಂಗತ ಸಾವಿರಾರು ಮಂದಿ ದೇಶವಿದೇಶದಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಜಿಲ್ಲಾ ಉಸ್ತುವಾರಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ, ನೂರು ವರ್ಷಗಳ ಹಿಂದೆ ಮುಸ್ಲಿಮ್ ಅಲ್ಪಸಂಖ್ಯಾತರಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಬೇಕು ಎಂಬ ಕಲ್ಪನೆ ಮೂಡಿದ್ದೇ ಒಂದು ಪವಾಡದಂತಿದ್ದು ಇಂದಿನ ದಿನಗಳಲ್ಲಿ ಅದು ಹೆಮ್ಮರವಾಗಿ ಬೆಳೆದು ನಿಂತಿದೆ. ಶಿಕ್ಷಣ ಬಗ್ಗೆ ಯೋಚಿಸುವುದೇ ಒಂದು ವಿಷಯವಾಗಿತ್ತು, ಮಹಿಳೆಯರ ಶಿಕ್ಷಣದ ಬಗ್ಗೆಯೂ ಅವರು ಅಂದು ಚಿಂತಿಸಿದ್ದು ನಿಜಕ್ಕೂ ಅವರನ್ನು ನಾವು ಸ್ಮರಿಸಲೇಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲೇ ಅತ್ಯಧಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಕೀರ್ತಿ ಅಂಜುಮನ್ ಸಂಸ್ಥೆಗೆ ಸಲ್ಲುತ್ತದೆ ಎಂದರು.

ಎಚ್.ಆರ್.ಡಿ ಇಲಾಖೆಯ ವರದಿಯಂತೆ ಮುಸ್ಲಿಮರಲ್ಲಿ ಶಿಕ್ಷಣದ ರೇಖೆಯ ಅತಿಕಡಿಮೆಯಾಗಿದ್ದು ಇತ್ತೀಚೆಗೆ ಅದು ಬದಲಾವಣೆಯಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಇನ್ನು ಬಹಳಷ್ಟು ಅಭಿಯಾಗಬೇಕಿದೆ. ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಗಮನ ಹರಿಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದ್ದು ಮಹಿಳಾ ಶಿಕ್ಷಣಕ್ಕೂ ಆಧ್ಯತೆ ನೀಡಬೇಕು ಎಂದರು.

ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಮಾತನಾಡಿ, ವಿದ್ಯಾರ್ಥಿ ಸಮುದಾಯ ಬಲಿಷ್ಠವಾದಾಗ ದೇಶ ಬಲಿಷ್ಠವಾಗೊಳ್ಳುತ್ತದೆ. ಯುವಜನತೆ ದೇಶದ ಸಂಪತ್ತಾಗಿದ್ದು ಉತ್ತಮ ವಿದ್ಯಾರ್ಥಿಗಳ ನಿರ್ಮಾಣ ಶಿಕ್ಷಣ ಸಂಸ್ಥಗಳಿಂದಾಗಬೇಕು. ಅಂಜುಮನ್ ಸಂಸ್ಥೆ ಕಳೆದ ನೂರು ವರ್ಷಗಳಲ್ಲಿ ಮೌಲ್ಯಯುತ, ಮಾನವೀಯ ಶಿಕ್ಷಣಕ್ಕ ಒತ್ತು ನೀಡಿದ್ದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಭಟ್ಕಳಕ್ಕೂ ದ.ಕ. ಜಿಲ್ಲೆಗೆ ಭಾವನಾತ್ಮಕ ಸಂಬಂಧವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಡವಾಳ ಹೂಡುವುದರ ಮೂಲಕ ಆರ್ಥಿಕ ಸದೃಢತೆಗೆ ಕಾರಣವಾಗಿದ್ದಾರೆ ಎಂದ ಅವರು ಭಟ್ಕಳದ ಒಳಚರಂಡಿ ವ್ಯವಸ್ಥೆ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಈಗಾಗಲೆ ನನ್ನ ಇಲಾಖೆಯಿಂದ 110 ಕೋಟಿ ರೂ. ಮಂಜೂರಿಯಾಗಿದ್ದು ಮುಂದಿನ ದಿನಗಳಲ್ಲಿ ಅನುದಾನವೂ ಬಿಡುಗಡೆಯಾಗಲಿದೆ ಎಂದರು.

ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಟ್, ಶಾಸಕ ಸುನಿಲ್ ನಾಯ್ಕ್ ಈ ಸಂದರ್ಭದಲ್ಲಿ ಮಾತನಾಡಿದರು. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜುಕಾಕೋ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಇಸ್ಮಾಯಿಲ್ ಸಂಸ್ಥೆಯ ಬೆಳವಣೆಗೆ ಕುರಿತು ವಿವರಿಸಿದರು.

ಶತಮಾನೋತ್ಸವ ಸಮಾರಂಭದ ಸಂಚಾಲಕ ಎಂ.ಜೆ.ಅಬ್ದುಲ್ ರಖೀಬ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಮರ್ಕಝಿ ಖಲೀಫಾ ಜಮಾಅತುಲು ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಉಪನ್ಯಾಸ ನೀಡಿದರು. ಅಂಜುಮನ್ ಪಿ.ಯು.ಕಾಲೇಜ್ ಉಪನ್ಯಾಸಕ ಅಬ್ದುಲ್ ರವೂಫ್ ಸವಣೂರು ಅತಿಥಿಗಳನ್ನು ಪರಿಚಯಿಸಿದರು.

ವೇದಿಕೆಯಲ್ಲಿ  ಸಂಸ್ಥೆಯ ಮಾಜಿ ಅಧ್ಯಕ್ಷ ಡಿ.ಎಚ್.ಶಬ್ಬರ್ ಸಾಹೇಬ್, ಮರ್ಕಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝೀ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಖಾಝೀಯಾ, ಝಾಹಿದ್ ರುಕ್ನುದ್ದೀನ್, ಮೊಹಸಿನ್ ಶಾಬಂದ್ರಿ, ಇಸ್ಹಾಖ್ ಶಾಬಂದ್ರಿ, ಮಾಜಿ ಶಾಸಕ ಜೆ.ಡಿ.ನಾಯ್ಕ, ಸೈಯ್ಯದ್ ಅಬ್ದುಲ್ ರಹೀಮ್ ಬಾತಿನ್, ಎಸ್.ಎಂ.ಸೈಯ್ಯದ್ ಅಬ್ದುಲ್ ಅಝೀಮ್ ಅಂಬಾರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ 70 ಮಂದಿ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News