ನಾಪತ್ತೆಯಾದ ಮೀನುಗಾರರ ಪತ್ತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ: ಯು.ಟಿ. ಖಾದರ್
ಭಟ್ಕಳ, ಜ. 5: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿ ನಾಪತ್ತೆಯಾದ ಬೋಟು ಹಾಗೂ ಅದರಲ್ಲಿರುವ ಮೀನುಗಾರರ ಪತ್ತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅವರು ಮಹಾರಾಷ್ಟ್ರದಿಂದ ಹೊರಗೆ ಮೀನುಗಾರಿಕೆ ಮಾಡುತ್ತಿರುವಾಗ ನಾಪತ್ತೆಯಾಗಿದ್ದಾರೆ. ಈಗಾಗಲೇ ರಾಜ್ಯ ಸರಕಾರ ಮಹಾರಾಷ್ಟ್ರ ಸರಕಾರದೊಂದಿಗೆ ಮಾತನಾಡಿ ಪತ್ತೆಗೆ ಕ್ರಮ ಕೈಗೊಂಡಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಭಟ್ಕಳದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭ ಪತ್ರಕರ್ತರ ಪ್ರಶ್ನೆಗೆ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಡಿ. 13ರಂದು ಮಲ್ಪೆಗೆ ಮೀನುಗಾರಿಕೆಗೆ ತೆರಳಿದ್ದ ಬೋಟು ಡಿ.15ರಂದು ತಡರಾತ್ರಿಯ ತನಕ ಮಹಾರಾಷ್ಟ್ರದ ಸಿಂಧುದುರ್ಗದಿಂದ ಹೊರಗೆ ಸಮುದ್ರದಲ್ಲಿ ಇದ್ದು ಬೋಟಿನಲ್ಲಿದ್ದ 7 ಜನರು ಸುರಕ್ಷಿತವಾಗಿ ಕರೆ ತರಲು ಸರಕಾರ ಎಲ್ಲ ಕ್ರಮ ಕೈಗೊಂಡಿದೆ. ಇಲ್ಲಿನ ತನಕ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯ ವಾಗಿಲ್ಲ. ಈಗಾಗಲೇ ಶೋಧ ಕಾರ್ಯಕ್ಕೆ ಎರಡೂ ಸರಕಾರಗಳು ಕ್ರಮಕೈಗೊಂಡಿವೆ. ನಮ್ಮ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದು ಗೃಹ ಸಚಿವ ಎಂ.ಬಿ. ಪಾಟೀಲ್ ಅವರು ಕೂಡಾ ಮೀನುಗಾರರೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಅವರು ಸುರಕ್ಷಿತವಾಗಿ ಸಿಗುತ್ತಾರೆನ್ನುವ ಭರವಸೆ ನಮಗಿದೆ. ಅವರ ಪತ್ತೆಗೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದು ಖಾದರ್ ತಿಳಿಸಿದರು.