×
Ad

ಅಂಜುಮನ್ ಶಿಕ್ಷಣ ಸಂಸ್ಥೆ ಉ.ಕ. ಜಿಲ್ಲೆಯಲ್ಲೇ ಮುಂಚೂಣಿಯಲ್ಲಿದೆ: ಆರ್.ವಿ. ದೇಶಪಾಂಡೆ

Update: 2019-01-05 21:08 IST

ಭಟ್ಕಳ, ಜ. 5: ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅಂಜುಮನ್ ಶಿಕ್ಷಣ ಸಂಸ್ಥೆ 22 ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಾ ಮುಂಚೂಣಿಯಲ್ಲಿದೆ ಎಂದು ರಾಜ್ಯದ ಕಂದಾಯ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಅವರು ಇಲ್ಲಿನ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲಿ ಇಂತಹ ಒಂದು ಉತ್ತಮ ವಿದ್ಯಾ ಸಂಸ್ಥೆಗಳು ದೇಶದಲ್ಲಿಯೇ ವಿರಳ ಎಂದ ಅವರು ಭಟ್ಕಳದಂತಹ ಊರಿನಲ್ಲಿ ಸುಮಾರು ನೂರು ವರ್ಷದ ಹಿಂದೆ ಜನರ ವಿದ್ಯಾಭ್ಯಾಸದ ಕುರಿತು ಚಿಂತೆ ಮಾಡುವವರು ಇರಲಿಲ್ಲ ಎಂದರೂ ತಪ್ಪಿಲ್ಲ. ಅಲ್ಲದೇ ಮುಸ್ಲಿಂ ಸಮುದಾಯದಲ್ಲಿ ಅತೀ ಕಡಿಮೆ ಜನರು ವಿದ್ಯಾಭ್ಯಾಸ ಮಾಡುತ್ತಿದ್ದರು. ಅಂತಹ ಸಮಯದಲ್ಲಿಯೇ ತಮ್ಮ ದೂರದೃಷ್ಟಿತ್ವದಿಂದ ಒಂದು ವಿದ್ಯಾ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರನ್ನು ಸ್ಮರಿಸಬೇಕಾಗಿತ್ತದೆ. ಒಂದು ಅಂಕಿ ಅಂಶದ ಪ್ರಕಾರ 6 ರಿಂದ 14 ವರ್ಷದೊಳಗಿನ ಮುಸ್ಲಿಂ ಮಕ್ಕಳು ಶಾಲೆಗೇ ಹೋಗುವುದಿಲ್ಲವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೋರ್ವರೂ ವಿದ್ಯೆಗೆ ಮಹತ್ವ ಕೊಡುವುದರಿಂದ ಎಲ್ಲಾ ವರ್ಗದ ಜನರೂ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯೆಗೆ ಗುಣಮಟ್ಟದ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದ್ದು ಪ್ರತಿಯೋರ್ವರೂ ಕೂಡಾ ಆ ಕುರಿತು ಚಿಂತಿಸಬೇಕಾಗಿದೆ ಎಂದ ಅವರು ಹಿಂದೆ ಶ್ರೀಮಂತರೂ ಕೂಡಾ ವಿದ್ಯೆ ಕಲಿಯುತ್ತಿರಲಿಲ್ಲ. ಆದರೆ ಇಂದು ಶಿಕ್ಷಣ ಮತ್ತು ಆರೋಗ್ಯ ಪ್ರತಿಯೋರ್ವರೂ ಆದ್ಯತೆಯ ಮೇಲೆ ಕಾಪಾಡಿಕೊಂಡು ಬರಬೇಕಾಗಿದೆ ಎಂದರು.

ಅಂಜುಮಾನ್ ಸಂಸ್ಥೆ ಈಗಾಗಲೇ ಅನೇಕ ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿದ್ದು ಮಹಿಳೆಯರ ಶಿಕ್ಷಣಕ್ಕೂ ಕೂಡಾ ಹೆಚ್ಚಿನ ಮಹತ್ವ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ.  ಮುಸ್ಲಿಂ ಸಮುದಾಯದಲ್ಲಿ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯರಿದ್ದು ಅವರಿಗೆ ಶಿಕ್ಷಣ ಕೊಡಬೇಕಾಗಿದ್ದು ಎಲ್ಲರ ಕರ್ತವ್ಯ ವಾಗಿದೆ ಅಂತಹ ಕಾರ್ಯ ಅಂಜುಮಾನ್ ಮಾಡುತ್ತಿದೆ ಎಂದರು. 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನತೆಗೆ ಅತ್ಯವಿರುವ ಶಿಕ್ಷಣ ಕೊಡಬೇಕು. ಇಂದು ಹೊಸ ಹೊಸ ಕೋರ್ಸುಗಳನ್ನು ಆರಂಭಿಸುವ ಮೂಲಕ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು ಎಂದು ಹೇಳಿದ ಅವರು ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂತೆ ಕರೆ ನೀಡಿದರು. ನಾವು ರಾಷ್ಟ್ರ ಕಟ್ಟುವ, ರಾಷ್ಟ್ರದ ಪ್ರಗತಿಗೆ ಸಹಾಯ ಮಾಡುವವನ್ನು ತಯಾರು ಮಾಡುವ ಶಿಕ್ಷಣ ಕೊಡಬೇಕಾಗಿದೆ ಎಂದೂ ದೇಶಪಾಂಡೆ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News