ವರ್ಗಾವಣೆಗೊಂಡ ಜಂಟಿ ನಿರ್ದೇಶಕರಿಂದಲೇ ರಾಕೇಶ್ ಅಸ್ತಾನಾ ತನಿಖೆ: ಸಿಬಿಐ
ಹೊಸದಿಲ್ಲಿ, ಜ.5: ಸದ್ಯ ವರ್ಗಾವಣೆಗೊಂಡಿರುವ ಜಂಟಿ ನಿರ್ದೇಶಕರೇ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಭಾಗಿಯಾಗಿದ್ದಾರೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಲಿದ್ದಾರೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಜಂಟಿ ನಿರ್ದೇಶಕ ವಿ.ಮುರುಗೇಶನ್ ಅವರನ್ನು ಸಿಬಿಐ ಶುಕ್ರವಾರದಂದು ವರ್ಗಾವಣೆಗೊಳಿಸಿತ್ತು. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮೊಯಿನ್ ಕುರೇಶಿ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೊಳಪಟ್ಟಿದ್ದ ಉದ್ಯಮಿ ಸತೀಶ್ ಬಾಬು ಸನಾರಿಂದ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಲಂಚ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮುರುಗೇಶನ್ ಅವರನ್ನು ಅಸ್ತಾನಾ ಪ್ರಕರಣದ ತನಿಖೆ ನಡೆಸುತ್ತಿದ್ದ ತಂಡದಿಂದ ಕಲ್ಲಿದ್ದಲು ಹಗರಣ ಪ್ರಕರಣದ ತಂಡಕ್ಕೆ ವರ್ಗಾಯಿಸಲಾಗಿತ್ತು.
ಮುರುಗೇಶನ್ ಅವರನ್ನು ಅಸ್ತಾನಾ ಪ್ರಕರಣದ ತನಿಖೆ ನಡೆಸುವ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಲ್ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದರು. ಮುರುಗೇಶನ್ ಅವರ ಸ್ಥಾನಕ್ಕೆ ಜಂಟಿ ನಿರ್ದೇಶಕ ಜಿ.ಕೆ ಗೋಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಅವರು ಅಸ್ತಾನಾ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿ(ಎಚ್‌ಕ್ಯೂ)-ಐ ವಲಯದ ನೇತೃತ್ವವನ್ನು ವಹಿಸಲಿದ್ದಾರೆ.
ಗೋಸ್ವಾಮಿ ಸಂಪೂರ್ಣ ವಲಯದ ನೇತೃತ್ವ ವಹಿಸಲಿದ್ದಾರೆ. ಆದರೆ ರಾಕೇಶ್ ಅಸ್ತಾನಾ ಪ್ರಕರಣವನ್ನು ಮಾತ್ರ ಮುರುಗೇಶನ್ ಅವರೇ ನಡೆಸಲಿದ್ದಾರೆ ಎಂದು ದಯಾಲ್ ತಿಳಿಸಿದ್ದಾರೆ.