×
Ad

‘ಕಾಸರಗೋಡಿನಲ್ಲಿ ಕನ್ನಡ ಉಳಿಯಲು ನಿರಂತರ ಪ್ರಯತ್ನ ಅಗತ್ಯ’

Update: 2019-01-05 22:09 IST

ಉಡುಪಿ, ಜ. 5: ಕಾಸರಗೋಡಿನಲ್ಲಿ ಕನ್ನಡ ಭಾಷೆಯ ಉಳಿಯಲು ನಿರಂತರ ಪ್ರಯತ್ನ ಅಗತ್ಯ. ಅಲ್ಲಿ ಕನ್ನಡ, ಸಂಸ್ಕೃತಿ ಉಳಿವಿಗೆ ಎಡನೀರು ಮಠಾಧೀಶರಾದ ಶ್ರೀಕೇಶವನಾಂದ ಭಾರತಿ ಸ್ವಾಮೀಜಿ ಕೊಡುಗೆ ಅಪಾರ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪಲಿಮಾರು ಮಠದ ವತಿಯಿಂದ ಶನಿವಾರ ರಾಜಾಂಗಣದಲ್ಲಿ ಆಯೋಜಿಸಿದ್ದ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪೀಠಾರೋಹಣದ 60ನೇ ವರ್ಷದ ಅಭಿನಂದನಾ ಸಮಾರಂಭ ಹಾಗು ವಜ್ರ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಎಡನೀರುಮಠದ ಕೇಶವಾನಂದ ಭಾರತೀ ಸ್ವಾಮೀಜಿ, ಅಂದಿನ ದಿನಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಿದ್ದರು. ಆ ಸಂದರ್ಭ ದಲ್ಲಿ ಕೇರಳ ಸರ್ಕಾರ ಮಲಯಾಳಂ ಭಾಷೆಯನ್ನು ಕಲಿಸುವಂತೆ ಸಾಕಷ್ಟು ಒತ್ತಡ ಹೇರಿತ್ತು. ಈ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ನಡೆದರೂ ಸಹ ಸ್ವಾಮೀಜಿ ಧೃತಿಗೆಡದೆ ಕೇರಳ ಹಾಗೂ ಕರ್ನಾಟಕದ ಗಡಿನಾಡಿನ ಶಾಲೆಯಲ್ಲಿ ಕನ್ನಡವನ್ನು ಕಲಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದರು ಎಂದು ಪೇಜಾವರ ಶ್ರೀ ಹೇಳಿದರು.

ಭೂ ಮಸೂದೆ ಕಾಯಿದೆ ಜಾರಿಗೆ ಬಂದ ಸಂದರ್ಭದಲ್ಲೂ ಅಂದಿನ ಕೇರಳ ಸರಕಾರ ಮಠದ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತ್ತು. ಆ ಸಮಯದಲ್ಲೂ ಎಡನೀರುಶ್ರೀಗಳು, ಮಠದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರು. ಆಗಿನ 12 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ನಾಗರಿಕ ಹಕ್ಕು ಎತ್ತಿ ಹಿಡಿದು ಆದೇಶ ನೀಡಿತು ಎಂದು ಪೇಜಾವರಶ್ರೀಗಳು ನೆನಪಿಸಿಕೊಂಡರು.

ಪೇಜಾವರಶ್ರೀ ಹಾಗೂ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ಸ್ವಾಮೀಜಿ ಅವರು ಎಡನೀರುಶ್ರೀಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಲಿಮಾರು ಮಠದ ಪರವಾಗಿ ವಿವಿಧ ಬಗೆಯ ಫಲ ಹಾಗೂ ಧಾನ್ಯಗಳನ್ನು ಸರ್ಮಪಿಸಲಾಯಿತು.

ಅದಮಾರು ಮಠದ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಪಲಿಮಾರು ಮಠದ ಬಿ.ಮಧುಸೂದನ್ ಸ್ವಾಗತಿಸಿ, ಡಾ.ವಂಶಿಕೃಷ್ಣ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News