×
Ad

ಎಸ್.ಟಿ. ಹೆಸರಿನ ಕಂಟೈನರ್ ಪತ್ತೆ; ತಂಡದಿಂದ ತನಿಖೆ: ಎಸ್ಪಿ ನಿಂಬರ್ಗಿ

Update: 2019-01-05 22:33 IST

ಉಡುಪಿ, ಜ.5: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ ಎಸ್.ಟಿ. (ಸುವರ್ಣ ತ್ರಿಭುಜ) ಎಂದು ಬರೆಯಲಾದ ಪ್ಲಾಸ್ಟಿಕ್ ಕಂಟೈನರ್‌ಗಳು ಪತ್ತೆ ಯಾಗಿದ್ದು, ಈ ಕುರಿತು ಅಲ್ಲೇ ಉಳಿದುಕೊಂಡಿರುವ ಜಿಲ್ಲೆಯ ಎರಡು ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಮೀನುಗಾರರ ನಾಪತ್ತೆ ಸಂಬಂಧ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಎಸ್.ಕೆ. ಎಂದು ಬರೆಯಲಾದ ಒಂದು ಪ್ಲಾಸ್ಟಿಕ್ ಕಂಟೈನರ್ ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಸಮುದ್ರದಲ್ಲಿ ಸಿಕ್ಕಿರುವ ಎರಡು ಪ್ಲಾಸ್ಟಿಕ್ ಕಂಟೈನರ್ ಗಳಲ್ಲಿದ್ದ ಎಸ್.ಕೆ. ಎಂಬ ಬರಹವನ್ನು ಮೀನುಗಾರರು ಅಳಿಸಿ ಬೇರೆ ಹೆಸರನ್ನು ಬರೆದಿರುವ ವಿಚಾರ ಕೂಡ ತಿಳಿದುಬಂದಿದೆ. ಈ ಬಗ್ಗೆ ಸಿಂಧುದುರ್ಗ ಎಸ್ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರು ಕೂಡ ಖುದ್ಧಾಗಿ ವಿಚಾರಣೆ ಮಾಡುತ್ತಿದ್ದಾರೆ ಎಂದರು.

ನಾಪತ್ತೆ ಪ್ರಕರಣ ದಾಖಲಾದ ದಿನವೇ ಜಿಲ್ಲಾ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಯ ನಾಲ್ಕು ತಂಡಗಳನ್ನು ರಚಿಸಿ ಗಂಗೊಳ್ಳಿ, ಭಟ್ಕಳ, ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲು ಹುಡುಕಾಟ ಮಾಡಲಾಗಿದೆ. ಅಲ್ಲದೆ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿದೆ. ಕೋಸ್ಟ್ ಗಾರ್ಡ್ ನವರು ಡಿ.23ರಿಂದ ಗುಜರಾತ್‌ನಿಂದ ಲಕ್ಷದ್ವೀಪದವರೆಗೆ ಹುಡುಕಾಟ ಮಾಡುತ್ತಿದ್ದಾರೆ. ಅದೇ ರೀತಿ ನೌಕಪಡೆಯವರು ಕೂಡ ತಮ್ಮ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಮಾಡುತಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News