×
Ad

ವಿರಾಸತ್‍ನಲ್ಲಿ ರಂಗೇರಿತು ಸುಖ್ವಿಂದರ್ ಸಿಂಗ್‍ನ "ಗಾನ ತರಂಗ"

Update: 2019-01-05 22:49 IST

ಮೂಡುಬಿದಿರೆ, ಜ. 5: ರಜತ ಮಹೋತ್ಸವದ ಸಂಭ್ರಮದಲ್ಲಿ ನಡೆಯುತ್ತಿರುವ ಆಳ್ವಾಸ್ ವಿರಾಸತ್‍ನ 2ನೇ ದಿನವಾಗಿರುವ ಶನಿವಾರದಂದು ಹಿಂದಿ ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕ ಮುಂಬೈನ ಸುಖ್ವಿಂದರ್ ಸಿಂಗ್ ಮತ್ತು ಬಳಗದಿಂದ ಪ್ರಸ್ತುತಗೊಂಡ "ಗಾನ ತರಂಗ"ವು  ರಸಿಕರನ್ನು ಮೇಳೈಸಿತು. 

ಮೊದಲ ದಿನ ಸಾದರಗೊಂಡ ಪದ್ಮಶ್ರೀ ಪುರಸ್ಕೃತ ಗಾಯಕ ಹರಿಹರನ್ ಅವರ ತಕ್ಕ ಮಟ್ಟಿನ ಹಾಡುಗಳು ಸಂಗೀತ ರಸಿಕರಿಗೆ ಹೆಚ್ಚಿನ ಅಸ್ವಾದವನ್ನು ನೀಡಿರಲಿಲ್ಲ. ಆದರೆ 2ನೇ ದಿನ ಸುಖ್ವಿಂದರ್ ಸಿಂಗ್ ಮತ್ತು ರಾಡ್ನಿ ತ್ಯಾಗರಾಜ್ ಅವರ "ಚಲ್ ಚಯ್ಯಾ ಚಯ್ಯಾ", "ಹೋಲೆ ಹೋಲೆ ಹೋ ಜಾಯೇಗಾ ಪ್ಯಾರ್" "ಅರೆ ಚಲ್ ಚಲ್ ಚಡಕೋಂಬೆ", "ಮರ್‍ಜಾಯಿ ಮರ್‍ಜಾಯಿ" "ಸಾಕೀಸೆ ಮೊಹಬತ್ ಹೋತಿ ಹೈ.." ಹಾಗೂ "ಜೈ ಹೋ" ಹಾಡುಗಳ ಸಹಿತ 2018ರಲ್ಲಿ ಬಿಡುಗಡೆಯಾಗಿರುವ ಹೊಸ ಹೊಸ ಸಿನೆಮಾಗಳ ಹಾಡುಗಳು ಎಲ್ಲರ ಮನ ಗೆದ್ದವು. ಸಹ ಗಾಯಕಿ ರಾಗ್ನಿ ಕಾಡ್ಲಿಕರ್, ಯಕ್ತಾರಿನ ನಿಕೊಲಾವ (ಸ್ಯಾಕ್ಸೋಫೋನ್), ರೋಹಿತ್ ಪ್ರಸನ್ನ(ಕೊಳಲು), ಮನೋಜ್ ಭಾಟಿ( ತಬಲಾ), ಅಮರ್ ದೇಸಾಯಿ(ಕೀಬೋರ್ಡ್), ಶ್ಯಾಮ್ ಅಡ್ವಾಂಕರ್, ಗಿರೀಶ್ ವಿಶ್ವ( ಪರ್ಕಶನ್), ಅಕ್ಷಯ್ ಆಚಾರ್ಯ( ಕೀಬೋರ್ಡ್), ಅಮಿತ್ ದೇಸಾಯಿ(ಡ್ರಮ್ಸ್), ಶಾನನ್ ಪಿರೇರಾ, ದೀಪಕ್ ಸಿಂಹ (ಗಿಟಾರ್) ಹಿನ್ನೆಲೆಯಲ್ಲಿ ಸಹಕರಿಸಿದರು.

ಚಿಣ್ಣರೊಂದಿಗೆ ಚಕ್‍ದೇ ಇಂಡಿಯಾ

ಪ್ರೇಕ್ಷಕರಾಗಿ ಕುಳಿತ್ತಿದ್ದ 20 ಕ್ಕೂ ಅಧಿಕ ಚಿಣ್ಣರನ್ನು ಬರಮಾಡಿಕೊಂಡ ಸುಖ್ವಿಂದರ್ ಸಿಂಗ್ ಅವರ ಜೊತೆ 15 ನಿಮಿಷದಷ್ಟು ಕಾಲ ಚಕ್ ದೇ ಇಂಡಿಯ ಹಾಡನ್ನು ಹಾಡಿದರು. ಅಯ್ದ ಮಕ್ಕಳಿಂದಲೇ ಹಾಡಿಸಿದರು.

2ನೇ ಕಾರ್ಯಕ್ರಮವಾಗಿ ಮಧುಲಿತ ಮೊಹಪಾತ್ರ ನಿರ್ದೇಶನದಲ್ಲಿ ಬೆಂಗಳೂರಿನ ನೃತ್ಯಾಂತರ್ ಅಕಾಡೆಮಿ ಆಪ್ ಪರ್‍ಫಾರ್ಮಿಂಗ್ ಆಟ್ರ್ಸ್ ಕಲಾವಿದರಿಂದ ಒಡಿಸ್ಸಿ ನೃತ್ಯ, ಮೂರನೇ ಕಾರ್ಯಕ್ರಮವಾಗಿ ಕಲೈಮಾಮಣಿ ಶೈಲಜಾ ಅವರ ನಿರ್ದೇಶನದಲ್ಲಿ ಚೆನ್ನೈನ ಶೈಲಸುಧಾ ಅಕಾಡೆಮಿ ವತಿಯಿಂದ ಕೂಚುಪುಡಿ ನೃತ್ಯ ಹಾಗೂ ಆಳ್ವಾಸ್ ವಿದ್ಯಾರ್ಥಿಗಳ ಕಲಾ ತಂಡದಿಂದ  ಆಂಧ್ರದ ಬಂಜಾರ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಹಾಗೂ ಕಥಕ್ ನೃತ್ಯ-ಋತು ಸಂಭ್ರಮವು ಮನಸೂರೆಗೊಂಡಿತು.

ಇದೇ ಮೊದಲನೇ ಬಾರಿಗೆ ತಾನು ಕಾರ್ಯಕ್ರಮ ನೀಡಲು ಮಂಗಳೂರಿಗೆ ಆಗಮಿಸಿರುವುದರಿಂದ ಈ ಕಾರ್ಯಕ್ರಮವು ಉತ್ತಮವಾಗಿ ಮೂಡಿಬರಬಹುದು. ಅಲ್ಲದೆ ಈ ಶೋ ತನ್ನ ಜೀವನದ "ಬೆಸ್ಟ್ ಶೋ" ಆಗಲಿದೆ ಎಂದು ಗಾಯಕ ಸೂಖ್ವಿಂದರ್ ಸಿಂಗ್ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News