ಉಚ್ಚಿಲ ಬಡಾ ಗ್ರಾಮ ಪಂಚಾಯತ್: ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶರ್ಮಿಲಾ ಆಯ್ಕೆ

Update: 2019-01-05 17:51 GMT

ಪಡುಬಿದ್ರೆ, ಜ. 5: ಕುತೂಹಲ ಕೆರಳಿಸಿದ್ದ ಉಚ್ಚಿಲ ಬಡಾ ಗ್ರಾಮ ಪಂ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತೆ ಶರ್ಮಿಳಾ ಅಧ್ಯಕ್ಷರಾಗಿ ಆಯ್ಕೆಯಾದರು, 

21 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತ 13, ಕಾಂಗ್ರೆಸ್ ಬೆಂಬಲಿತ 7 ಹಾಗೂ ಎಸ್‍ಡಿಪಿಐ ಬೆಂಬಲಿತ ಓರ್ವ ಸದಸ್ಯರಿದ್ದಾರೆ. ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯೆ ನಾಗರತ್ನ ಅಧ್ಯಕ್ಷೆಯಾಗಿದ್ದರು. ತೆರವಾದ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆದಿತ್ತು.

ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ವಾರ್ಡ್‍ನ ಬಿಜೆಪಿ ಬೆಂಬಲಿತ ಶಕುಂತಳ ಹಾಗೂ ನಾಲ್ಕನೇ ವಾರ್ಡ್‍ನ ಎರಡನೆ ಬಾರಿ ಚುನಾಯಿತರಾಗಿದ್ದ ಕಾಂಗ್ರೆಸ್ ಬೆಂಬಲಿತ ಶರ್ಮಿಳಾ ನಾಮಪತ್ರ ಸಲ್ಲ್ಲಿಸಿದ್ದರು. ಬಳಿಕ ನಡೆದ ಗುಪ್ತ ಮತದಾನದಲ್ಲಿ ಶರ್ಮಿಳಾ 11 ಹಾಗೂ ಶಕುಂತಳಾ 10 ಮತ ಪಡೆಯುವ ಮೂಲಕ ಒಂದು ಮತದ ಅಂತರದಲ್ಲಿ ಶರ್ಮಿಳಾ ಜಯಗಳಿಸಿ ಅಧ್ಯಕ್ಷ ಗದ್ದುಗೆಗೇರಿದರು. ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್  ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಂದಾಯ ನಿರೀಕ್ಷಕ ರವಿಶಂಕರ್ ಉಪಸ್ಥಿತರಿದ್ದರು. ಅಧ್ಯಕ್ಷ ಸ್ಥಾನ ಒಳಿದ ಸಂಭ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಚ್ಚಿಲ ಪೇಟೆಯಲ್ಲಿ ಸಂಭ್ರಮ ಆಚರಿಸಿದರು. 

ಬಿಜೆಪಿ ಬೆಂಬಲಿತ ಸದಸ್ಯೆ ನಾಗರತ್ನ ಅಶೋಕ್ ಈ ಹಿಂದೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಕ್ರಮೇಣ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಈಕೆಯ ವಿರುದ್ಧ ಆರೋಪ ಮಾಡುತ್ತಿದ್ದರು. ಆ ಬಳಿಕ ನಿರಂತರ ಮೂರ್ನಾಲ್ಕು ಮಾಸಿಕ ಸಭೆಗಳಿಗೂ ಬಿಜೆಪಿ ಬೆಂಬಲಿತ ಸದಸ್ಯರು ಗೈರು ಹಾಜರಾಗಿ ಗ್ರಾಮದ ಸದಸ್ಯರಿಗೆ ತೊಂದರೆ ಉಂಟು ಮಾಡಿದ್ದರು. ಇದರಿಂದ ಬೇಸತ್ತ ಅಧ್ಯಕ್ಷೆ ನಾಗರತ್ನ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದರು.  ಒಟ್ಟು ಐದು ವರ್ಷಗಳ ಅವಧಿಯ ಅಧ್ಯಕ್ಷ ಹುದ್ದೆಯಲ್ಲಿ ನೂತನ ಅಧ್ಯಕ್ಷರಿಗೆ ಇನ್ನುಳಿದ ಒಂದು ವರ್ಷ ನಾಲ್ಕು ತಿಂಗಳ ಅವಧಿಯಷ್ಟೇ ಸಮಯಾವಕಾಶ ಲಭ್ಯವಾಗಲಿದೆ.

ಬಡಾ ಗ್ರಾಮ ಪಂಚಾಯತ್ ಅದ್ಯಕ್ಷೆ ಶರ್ಮಿಳಾ ಮಾತನಾಡಿ, ಎಲ್ಲಾ ಸದಸ್ಯರ ಸಹಕಾರದಲ್ಲಿ ಬಡಾ ಗ್ರಾಮ ಪಂಚಾಯತನ್ನು ಅಭಿವೃದ್ಧಿ ಪಥದೆಡೆಗೆ ಸಾಗಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆ ವ್ಯಕ್ತ ಪಡಿಸಿದರು. ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡ ದೇವಿ ಪ್ರಸಾದ್ ಶೆಟ್ಟಿ ತಾಲ್ಲೂಕು ಪಂಚಾಯತ್ ಸದಸ್ಯ ಯು.ಸಿ ಶೇಕಬ್ಬ, ದಿನೇಶ್ ಕೋಟ್ಯಾನ್, ಧೀರಜ್ ಹುಸೈನ್ ದೀಪಕ್ ಎರ್ಮಾಳು, ಶಾರದಾ ಪೂಜಾರಿ, ಸುಲೋಚನಾ ಬಂಗೇರ, ಆಶಾ ಕಟಪಾಡಿ, ಗಣೇಶ್ ಕೋಟ್ಯಾನ್, ಕರುಣಾಕರ ಪೂಜಾರಿ, ಅಶೋಕ್, ಸಂತೋಷ್ ಶೆಟ್ಟಿ, ಕಾಪು ಪುರಸಭಾ ಸದಸ್ಯರು ಬಡಾ ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News