ಮೀನುಗಾರರ ನಾಪತ್ತೆ ಪ್ರಕರಣ: ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕೆ ಬಂದ್

Update: 2019-01-06 08:21 GMT

ಮಂಗಳೂರು, ಜ.6: ಮಲ್ಪೆ ಬಂದರುವಿನಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಏಳು ಮೀನುಗಾರರನ್ನು ತುರ್ತು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿ ಮಲ್ಪೆಯಲ್ಲಿಂದು ನಡೆಯುತ್ತಿರುವ ಧರಣಿಯನ್ನು ಬೆಂಬಲಿಸಿ ಮಂಗಳೂರು ಬಂದರು ದಕ್ಕೆಯಲ್ಲಿ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ರವಿವಾರ ಮುಂಜಾನೆಯಿಂದಲೇ ದಕ್ಕೆಯಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆ ನಡೆದಿಲ್ಲ. ದೋಣಿ, ಬೋಟ್‌ಗಳು ಮೀನುಗಾರಿಕೆ ತೆರಳಲೂ ಇಲ್ಲ, ಈಗಾಗಲೇ ತೆರಳಿರುವ ಬೋಟುಗಳು ರವಿವಾರ ಮರಳಿ ಬಂದೂ ಇಲ್ಲ. 

ಸದಾ ಜನಜಂಗುಳಿಯಲ್ಲಿ ಕೇಂದ್ರವಾಗಿದ್ದ ಬಂದರು ದಕ್ಕೆಯು ರವಿವಾರ ಬಿಕೋ ಎನ್ನುತ್ತಿತ್ತು. ಹೊರ ರಾಜ್ಯದ ಕೂಲಿ ಕಾರ್ಮಿಕರು ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬರುತ್ತಿದೆ. ಅಂಗಡಿ, ಹೊಟೇಲ್‌ಗಳು ಭಾಗಶಃ ಮುಚ್ಚಲ್ಪಟ್ಟಿವೆ.

ಆಳ ಸಮುದ್ರ ಬೋಟು, ಪರ್ಸಿನ್ ಟ್ರಾಲ್ ಬೋಟ್, ಗಿಲ್‌ನೆಟ್ ಸಹಿತ ಸುಮಾರು 1,200ಕ್ಕೂ ಅಧಿಕ ಬೋಟುಗಳು ಬಂದರು ದಕ್ಕೆಯಲ್ಲಿದ್ದು, ಎಲ್ಲವೂ ಚಟುವಟಿಕೆ ಸ್ಥಗಿತಗೊಳಿಸಿವೆ.

ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳ ಪೈಕಿ ಕೆಲವು ರವಿವಾರ ಮುಂಜಾನೆಯ ವೇಳೆಗೆ ದಕ್ಕೆ ತಲುಪುವುದರಲ್ಲಿತ್ತು. ಆದರೆ, ಬಂದ್ ಹಿನ್ನೆಲೆಯಲ್ಲಿ ಒಂದು ದಿನ ವಿಳಂಬವಾಗಿ ಬರುವಂತೆ ಸೂಚಿಸಲಾಗಿದೆ.

ಈ ಮಧ್ಯೆ ಮಲ್ಪೆಯಲ್ಲಿ ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಲು ಮಂಗಳೂರಿನ ಬಹುತೇಕ ಮೀನುಗಾರರು ಕೂಡ ತೆರಳಿದ್ದು, ಮೀನುಗಾರರ ಪತ್ತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News