×
Ad

ಸಜಿಪ ನಡು: ಗ್ರಾಪಂನ ‘ಸಂಜೀವಿನಿ’ ಕಟ್ಟಡಕ್ಕೆ ಶಿಲಾನ್ಯಾಸ

Update: 2019-01-06 17:38 IST

ಬಂಟ್ವಾಳ, ಜ.6: ಗ್ರಾಮ ಪಂಚಾಯತ್‌ಗಳು ಗ್ರಾಮದ ಜನರ ಆಶೋತ್ತರಗಳನ್ನು ಈಡೇರಿಸುವ ಮೂಲಕ ಗ್ರಾಮಸ್ಥರ ವಿಶ್ವಾಸ ಗಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಜಿಪನಡು ಗ್ರಾಪಂನ ನಡೆ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಹೇಳಿದ್ದಾರೆ.

ಸಜಿಪನಡು ಗ್ರಾಪಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ‘ಸಂಜೀವಿನಿ’ ಕಟ್ಟಡಕ್ಕೆ ರವಿವಾರ ಶಿಲಾನ್ಯಾಸ ನೆರವೇರಿಸಿ, ಬಳಿ ನಡೆದ ಸಬಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಗ್ರಾಮದ ಬೇಕು ಬೇಡಗಳನ್ನು ಅರ್ಥೈಸಿಕೊಂಡು, ಪೂರಕ ಸ್ಪಂದನೆಯ ಜೊತೆಗೆ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವುದೇ ನಿಜವಾದ ಜನಪ್ರತಿನಿಧಿಯ ಕಾಯಕ ಎಂದ ಅವರು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಾ ರೀತಿಯ ಕೆಲಸ ಮಾಡಿದಾಗ ಗ್ರಾಮದ ಜನರಿಗೆ ಹೆಚ್ಚು ನಿಕಟರಾಗುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷ ಮುಹಮ್ಮದ್ ನಾಸಿರ್ ಸಜಿಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ಕೆಲವೊಂದು ಸಮಸ್ಯೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪೂರಕ ಬೆಂಬಲ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಮತ್ತಷ್ಟು ಒಗ್ಗಟ್ಟಿನಿಂದ ಮುನ್ನಡೆಯಬೇಕಾಗಿದೆ ಎಂದರು.

ರೈತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಕಳೆದ 32 ವರ್ಷಗಳಿಂದ ನಿಂತಿದ್ದ ಸಂತೆಯನ್ನು ಮತ್ತೆ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಲು ಸಲಹೆ ನೀಡಿದರು.

ಈ ಸಂದರ್ಭ ಜಿಪಂ ಸದಸ್ಯ ರವೀಂದ ಕಂಬಳಿ, ಮನಪಾ ಸದಸ್ಯ ಅಯಾಝ್ ಕೃಷ್ಣಾಪುರ, ಗ್ರಾಪಂ ಉಪಾಧ್ಯಕ್ಷೆ ಸುನೀತಾ ಶಾಂತಿ ಮೋರೆಸ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ, ಜೆಡಿಎಸ್ ಮುಖಂಡ ಮುಹಮ್ಮದ್ ಶಾಫಿ, ಅಶ್ರಫ್ ಮಂಚಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಜಿಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ಮುಳ್ಳಿಂಜೆ ವೆಂಕಟೇಶ್ವ ಭಟ್, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸಜಿಪನಡು ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಕೆ.ಮುಹಮ್ಮದ್, ಗುತ್ತಿಗೆದಾರ ಅಬ್ದುಲ್ ಖಾದರ್ ಹಾಜಿ, ಎಸ್‌ಡಿಪಿಐ ಸಜಿಪನಡು ಗ್ರಾಮ ಸಮಿತಿಯ ಅಧ್ಯಕ್ಷ ನವಾಝ್ ಸಜಿಪ, ಜೆಡಿಎಸ್ ಸಜಿಪನಡು ಗ್ರಾಮ ಸಮಿತಿಯ ಅಧ್ಯಕ್ಷ ಸತ್ತಾರ್ ಹಾಜಿ, ವಾರದ ಸಂತೆಯ ಗುತ್ತಿಗೆದಾರ ಇಸ್ಮಾಯೀಲ್ ಗೋಳಿಪಡ್ಪುಮೊದಲಾದವರು ಉಪಸ್ಥಿತರಿದ್ದರು.

ಪಿಡಿಒ ವೀರಪ್ಪ ಗೌಡ ಸ್ವಾಗತಿಸಿದರು. ಮುಝಮ್ಮಿಲ್ ವಂದಿಸಿದರು. ಎಸ್‌ಡಿಪಿಐ ಗ್ರಾಮ ಸಮಿತಿ ಸದಸ್ಯ ಮಲಿಕ್ ಕೊಳಕೆ ನಿರೂಪಿಸಿದರು


ಗ್ರಾಮದ ಅಭಿವೃದ್ಧಿಯ ಜೊತೆಗೆ ತನ್ನದೇ ಕನಸುಗಳನ್ನು ಹೊಂದಿರುವ ಗ್ರಾಪಂ ಅಧ್ಯಕ್ಷ ನಾಸಿರ್ ಅವರ ಬೇಡಿಕೆಯಂತೆ ಸಜಿಪನಡು ಶಾಲೆಯ ಅಭಿವೃದ್ಧಿಗೆ 2 ಲಕ್ಷ ರೂ. ಅನುದಾನ ನೀಡಲಾಗುವುದು.

-ಎಸ್.ಎಲ್.ಬೋಜೇ ಗೌಡ, ವಿಧಾನಪರಿಷತ್


ಸದಸ್ಯ ಸಜಿಪ ವಾರದ ಸಂತೆಗೆ ಚಾಲನೆ

ಸಜಿಪನಡು ಗ್ರಾಮ ಪಂಚಾಯತ್ ವತಿಯಿಂದ ಟಿ.ಆರ್. ಗ್ರೌಂಡ್ ಸಜಿಪ ಜಂಕ್ಷನ್ ಬಳಿ ವಾರದ ಸಜಿಪ ಸಂತೆಗೆ ರವಿವಾರ ಬೆಳಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಶಾಶ್ವತ ಸ್ಥಳವನ್ನು ಗುರುತಿಸಿದರೆ, ಸದ್ರಿ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಜಿಪಂನಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News