×
Ad

ಕರಾವಳಿ ಜಿಲ್ಲೆಗಳ ಮೀನುಗಾರರಿಂದ ಬೃಹತ್ ಪ್ರತಿಭಟನೆ: ಶೋಭಾ ಕರಂದ್ಲಾಜೆ ಭಾಷಣಕ್ಕೆ ಅಡ್ಡಿ

Update: 2019-01-06 18:41 IST

ಉಡುಪಿ, ಜ.6: ಕಳೆದ 23 ದಿನಗಳಿಂದ ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರನ್ನು ಹುಡುಕಿ ತರುವಂತೆ ಆಗ್ರಹಿಸಿ ಕರಾವಳಿಯ ಮೂರು ಜಿಲ್ಲೆಗಳ ಸಹಸ್ರಾರು ಸಂಖ್ಯೆಯ ಮೀನುಗಾರರು ರವಿವಾರ ಉಡುಪಿಯ ಅಂಬಲಪಾಡಿ ಜಂಕ್ಷನ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಮೀನುಗಾರರ ಆಕ್ರೋಶಕ್ಕೆ ಸುಮಾರು ನಾಲ್ಕು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಮೂರು ತಾಸುಗಳ ಕಾಲ ಸ್ಥಗಿತಗೊಂಡಿತು.

ಪ್ರತಿಭಟನೆಯ ಪ್ರಯುಕ್ತ ಮಂಗಳೂರು, ಮಲ್ಪೆ, ಕಾರವಾರ, ಗಂಗೊಳ್ಳಿ, ಭಟ್ಕಳಗಳಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಬೆಳಗ್ಗೆ ಮಲ್ಪೆ ಬಂದರಿನಲ್ಲಿ ಜಮಾಯಿಸಿದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರರ ಮುಖಂಡರು, ಜನಪ್ರತಿನಿಧಿಗಳು, ಮಹಿಳೆ ಯರು ಸೇರಿದಂತೆ 25 ಸಾವಿರಕ್ಕೂ ಅಧಿಕ ಮಂದಿ ಏಳು ಕಿ.ಮೀ. ದೂರದ ಅಂಬಲಪಾಡಿ ಜಂಕ್ಷನ್‌ವರೆಗೆ ಪಾದಯಾತ್ರೆಯ ಮೂಲಕ ತೆರಳಿದರು.

ಮಲ್ಪೆ ಬಂದರಿನಲ್ಲಿ ಮೀನುಗಾರ ಮುಖಂಡ ಜಿ.ಶಂಕರ್ ತೆಂಗಿನ ಕಾಯಿ ಒಡೆಯುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿದರು. ಕಲ್ಮಾಡಿ, ಆದಿಉಡುಪಿ ಮಾರ್ಗವಾಗಿ ಕರಾವಳಿ ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಆಗಮಿಸಿದ ಪ್ರತಿಭಟನಾ ಮೆರವಣಿಗೆಯು ಅಲ್ಲಿಂದ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ಎದುರಿನಿಂದ ಅಂಡರ್‌ಪಾಸ್‌ನ ಮೇಲ್ಭಾಗ ಮಾರ್ಗವಾಗಿ ಅಂಬಲಪಾಡಿ ಜಂಕ್ಷನ್‌ವರೆಗೆ ಸಾಗಿಬಂತು.

ಮೆರವಣಿಗೆಯುದ್ದಕ್ಕೂ ಪ್ರತಿಭಟನಕಾರರು ರಾಜ್ಯ ಹಾಗೂ ಕೇಂದ್ರ ಸರಕಾರ ಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು. ನಾಪತ್ತೆ ಯಾದ ಎಲ್ಲ ಮೀನುಗಾರರನ್ನು ಶೀಘ್ರವೇ ಹುಡುಕಿ ಕೊಡುವಂತೆ ಒತ್ತಾಯಿಸಿ ದರು. ಬಳಿಕ ಅಂಬಲಪಾಡಿ ಜಂಕ್ಷನ್‌ನಲ್ಲಿ ಸುಮಾರು ಎರಡು ತಾಸುಗಳ ಕಾಲ ಹೆದ್ದಾರಿ ತಡೆದು ಪ್ರತಿಭಟನಾ ಸಭೆಯನ್ನು ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಈ ಹೋರಾಟ ಕೇವಲ ಆರಂಭ ಮಾತ್ರ. ನಮಗೆ ನ್ಯಾಯ ಸಿಗದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳಿಸಲಾಗುವುದು. ಈಗ ಇರುವ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಾಪತ್ತೆಯಾಗಿರುವ ಮೀನುಗಾರ ರನ್ನು ಪತ್ತೆ ಹಚ್ಚಬೇಕು. ಕಡಲ್ಗಳ್ಳರು ಅಪಹರಿಸಿದ್ದರೆ ಅವರನ್ನು ಬಂಧಿಸಿ ಜೀವನ ಪರ್ಯಂತ ಜೈಲಿಗೆ ಹಾಕಿ ಕೊರಗುವಂತೆ ಮಾಡಬೇಕು. ಕೇಂದ್ರ, ರಾಜ್ಯ, ಗೋವಾ ಹಾಗೂ ಮಹಾರಾಷ್ಟ್ರ ಸರಕಾರಗಳು ಸಮಾಲೋಚನೆ ನಡೆಸಿ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಈ ಮೂಲಕ ಮೀನುಗಾರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಜಯಪ್ರಕಾಶ್ ಹೆಗ್ಡೆ, ಕಾಪು ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕ ರಘುಪತಿ ಭಟ್, ಕುಮಟಾ ಶಾಸಕ ದಿನಕರ ಶೆಟ್ಟಿ, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವೆ ಜಯಾಮಾಲ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಜಿ.ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಾರವಾರ ಮೀನುಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಬ್ರೆ, ನಾಡದೋಣಿ ಸಂಘದ ಬೈಂದೂರು ವಲಯದ ಅಧ್ಯಕ್ಷ ಆನಂದ ಖಾರ್ವಿ, ಕರ್ನಾಟಕ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಮನೋಹರ್ ಬೋಳಾರು, ನಾಡದೋಣಿ ಸಂಘದ ಮುಖಂಡ ನವೀನ್‌ಚಂದ್ರ ಉಪ್ಪುಂದ, ಭಟ್ಕಳ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ ವಸಂತ ಖಾರ್ವಿ, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ಮಾಜಿ ಶಾಸಕ ಯು.ಆರ್.ಸಭಾಪತಿ ಉಪಸ್ಥಿತರಿದ್ದರು.

ಈ ಹಿನ್ನೆಲೆಯಲ್ಲಿ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯ ವರೆಗೆ ಉಡುಪಿ ಕಿನ್ನಿಮುಲ್ಕಿಯಿಂದ ಅಂಬಾಗಿಲು ಜಂಕ್ಷನ್‌ವರೆಗಿನ ಸುಮಾರು ನಾಲ್ಕು ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ಬಿಗಿ ಭದ್ರತೆ- ಸಂಚಾರದಲ್ಲಿ ಬದಲಾವಣೆ

ರಾಷ್ಟ್ರೀಯ ಬಂದ್ ಹೋರಾಟದ ಹಿನ್ನೆಲೆಯಲ್ಲಿ ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಉಸ್ತುವಾರಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ಮಲ್ಪೆ ಹಾಗೂ ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಮಾರು 400 ಪೊಲೀಸ್ ಸಿಬ್ಬಂದಿಗಳು, 100ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು, ಮೂರು ಕೆಎಸ್‌ಆರ್‌ಪಿ, ಆರು ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆ ಸಂಪೂರ್ಣ ಚಿತ್ರೀಕರಣಕ್ಕೆ ಒಂದು ಡ್ರೋನ್ ಕೆಮೆರಾವನ್ನು ಬಳಸಲಾಗಿತ್ತು ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಹೆದ್ದಾರಿ ತಡೆಯ ಹಿನ್ನೆಲೆಯಲ್ಲಿ ಕುಂದಾಪುರದಿಂದ ಮಂಗಳೂರಿಗೆ ಹೋಗುವ ವಾಹನಗಳಿಗೆ ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ಮಾರ್ಗವಾಗಿ ಅಲ್ಲಿಂದ ಅಲೆವೂರು ರಸ್ತೆ, ಬೀಡಿನಗುಡ್ಡೆ ರಸ್ತೆ ಹಾಗೂ ಹಿರಿಯಡ್ಕ ಜೈಲು ರಸ್ತೆಯನ್ನು ಮತ್ತು ಮಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ವಾಹನಗಳಿಗೆ ಕಿನ್ನಿಮುಲ್ಕಿ ಮಾರ್ಗ-ಬ್ರಹ್ಮಗಿರಿ-ಬನ್ನಂಜೆ-ಕಲ್ಸಂಕ-ಅಂಬಾಗಿಲು ರಸ್ತೆಯನ್ನು ಪರ್ಯಾಯ ಮಾರ್ಗವಾಗಿ ಕಲ್ಪಿಸಲಾಗಿತ್ತು. ಲಾರಿ ಸಂಚಾರವನ್ನು ಸಾಸ್ತಾನ ಹಾಗೂ ಹೆಜ ಮಾಡಿ ಟೋಲ್ ಕೇಂದ್ರಗಳಲ್ಲಿಯೇ ಸ್ಥಗಿತಗೊಳಿಸಲಾಗಿತ್ತು.

ಶೋಭಾ ಕರಂದ್ಲಾಜೆ ಭಾಷಣಕ್ಕೆ ಅಡ್ಡಿ

ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಭಾಷಣ ಆರಂಭಿಸುತ್ತಿದ್ದಂತೆ ಕೆಲವು ಪ್ರತಿಭಟನಕಾರರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ‘ನಾನು ರಾಜಕೀಯ ಮಾತನಾಡಲು ಬಂದಿಲ್ಲ. ನೀವು ರಾಜಕೀಯ ಮಾಡುವುದಾದರೆ ಮಾಡಿ’ ಎಂಬ ಹೇಳಿದರು.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ನಾವು ರಾಜಕೀಯ ಮಾಡುವುದಿಲ್ಲ. ನೀವು ನೇರ ಮಾತನಾಡಿ. ನೀವು ಕೇವಲ ಕೇಂದ್ರ ಸಚಿವರಿಗೆ ಮನವಿ ಕೊಟ್ಟಿದ್ದು ಮಾತ್ರ, ಏನು ಕೆಲಸ ಮಾಡಿಲ್ಲ. ಮನವಿ ಕೊಡುವುದರಿಂದ ಏನು ಕೆಲಸ ಆಗಲ್ಲ ಎಂದರು. ಬಳಿಕ ಮುಖಂಡರು ಪ್ರತಿಭಟನಾರರನ್ನು ಸಮಾಧಾನ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News