ಮೀನುಗಾರರ ನಿರ್ಲಕ್ಷ್ಯ ಅಸಾಧ್ಯ: ಸಚಿವೆ ಜಯಾಮಾಲ
ಉಡುಪಿ, ಜ.6: ನೀರಿನ ಜೊತೆ ಸಂಘರ್ಷಕ್ಕೆ ಇಳಿದು ಬದುಕನ್ನು ಕಟ್ಟಿ ಕೊಳ್ಳುವ ಮೀನುಗಾರರನ್ನು ಸರಕಾರಗಳು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಾಪತ್ತೆ ಪ್ರಕರಣ ದಾಖಲಾದ ದಿನದಿಂದ ಸರಕಾರ ಕಾರ್ಯಾಚರಣೆಯಿಂದ ಒಂದು ಚೂರು ಹಿಂದೆ ಸರಿದಿಲ್ಲ ಎಂದು ಉಡುಪಿ ಜಿಲ್ಲಾ ಉ್ತುವಾರಿ ಸಚಿವೆ ಜಯಾಮಾಲ ಹೇಳಿದ್ದಾರೆ.
ಅಂಬಲಪಾಡಿ ಜಂಕ್ಷನ್‌ನಲ್ಲಿ ರವಿವಾರ ನಡೆದ ಮೀನುಗಾರರ ಪ್ರತಿಭಟನಾ ಸಭೆಗೆ ಆಗಮಿಸಿ ಮಲ್ಪೆ ಮೀನುಗಾರರ ಸಂಘದಿಂದ ಮನವಿ ಸ್ವೀಕರಿಸಿ ಅವರು ಮಾತನಾಡುತಿದ್ದರು. ನಿಮ್ಮ ನೋವು ನಮಗೆ ಅರ್ಥ ಆಗುತ್ತದೆ. ಏಳು ಕುಟುಂಬದ ಜೊತೆ ಇಡೀ ಕರ್ನಾಟಕವೇ ಇದೆ. ಏಳು ಜೀವಗಳು ಸುರಕ್ಷಿತ ವಾಗಿ ಬರುತ್ತದೆ ಎಂಬ ನಂಬಿಕೆಯಲ್ಲಿ ನಾನು ಕೂಡ ಹೊಂದಿದ್ದೇನೆ. ಅವರನ್ನು ಹುಡುಕಿ ತರುವುದು ನಮ್ಮ ಜವಾಬ್ದಾರಿ. ಇದಕ್ಕೆ ಸರಕಾರ ಬದ್ಧವಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ಮೀನುಗಾರರನ್ನು ಜೀವಂತ ವಾಗಿ ವಾಪಾಸ್ಸು ಕರೆ ತರುವ ಕೆಲಸ ಮಾಡಬೇಕಾಗಿದೆ. ಅದಕ್ಕಾಗಿ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ನೌಕಪಡೆ ಕೂಡ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಮತ್ತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ನಾನು ಈ ಹಿಂದೆಯೇ ಪತ್ರ ಬರೆದು ಸೈನ್ಯದ ಮೂಲಕ ಮೀನುಗಾರರನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ನೆರವು ತೆಗೆದುಕೊಂಡು ರಾಜ್ಯ ಸರಕಾರ ಎಲ್ಲ ರೀತಿಯ ಕೆಲಸ ಮಾಡುತ್ತದೆ. ರೈತರಿಗಿಂತ 100 ಪಟ್ಟು ಸಂಘರ್ಷ ಜೀವನ ನಡೆಸುವವರು ಮೀನುಗಾರರು. ಏಳು ಜೀವಗಳನ್ನು ಹುಡುಕಿ ತರುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಚಿವೆ ಜಯಾಮಾಲ ಭರವಸೆ ನೀಡಿದರು.