×
Ad

‘ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅತಿ ಹೆಚ್ಚು ಜವಾಬ್ದಾರಿ’

Update: 2019-01-06 20:14 IST

ಉಡುಪಿ, ಜ.6: ಉಳಿದೆಲ್ಲಾ ಇಲಾಖೆಗಳಿಗೆ ಹೋಲಿಸಿದರೆ, ನಾಡಿನ ಅರಣ್ಯ ಹಾಗೂ ಪ್ರಕೃತಿಯನ್ನು ರಕ್ಷಿಸುವ ಮಹತ್ವದ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಾರಿ ಪ್ರಕಾಶ್ ನೆಟಾಲ್ಕರ್ ಹೇಳಿದ್ದಾರೆ.

ನಗರದ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘದ 19ನೇ ವರ್ಷದ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯ ಉಪ ವಲಯ ಅರಣ್ಯಾಧಿಕಾರಿಗಳ ಸಂಘ ಇಡೀ ರಾಜ್ಯಕ್ಕೆ ಮಾದರಿ ಸಂಘವಾಗಿದೆ. ರಾಜ್ಯದಲ್ಲಿ ಯಾವುದೇ ಸರಕಾರಿ ಇಲಾಖೆಯ ಸಂಘವೊಂದು ಕಳೆದ 19 ವರ್ಷಗಳಿಂದ ಇಷ್ಟೊಂದು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ತನ್ನ ಗಮನಕ್ಕೆ ಬಂದಿಲ್ಲ ಎಂದು ನಟಾಲ್ಕರ್ ನುಡಿದರು.

ಇಂಥ ಕಾರ್ಯಕ್ರಮಗಳಿಂದ ಹಿರಿಯ ಅಧಿಕಾರಿಗಳು ಹಾಗೂ ಕಳೆದ ಹಂತದ ಸಿಬ್ಬಂದಿಗಳ ನಡುವಿನ ಅಂತರ ಕಡಿಮೆಯಾಗಿ, ಅವರೊಳಗೆ ಅನ್ಯೋನ್ಯ ಬಾಂದವ್ಯ ಬೆಳೆಯುತ್ತದೆ ಎಂದವರು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಪು ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಅರಣ್ಯಾಧಿಕಾರಿಗಳು ಪ್ರಕೃತಿಯ ನಡುವೆ ಬದುಕುವವರಾಗಿದ್ದು, ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಸಮಾಜದ ಕಡೆಗೆ ಮುಖ ಮಾಡಿ ನಿಲ್ಲಬೇಕಿದೆ. ಕೈ ಹಿಡಿದು ಮುನ್ನಡೆಸಲು ಸಂಘಟನೆ ಅಗತ್ಯ ಎಂದರು.

ಸಮಾರಂಭದಲ್ಲಿ ಈ ವರ್ಷದ ಡೈರಿಯನ್ನು ನಟಾಲ್ಕರ್ ಬಿಡುಗಡೆ ಗೊಳಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಕ್ಷತಾ ಪೂಜಾರಿ ಬೋಳ, ವಿಶ್ವದ ಅತೀ ಕಿರಿಯ ಮಾನವ ಕ್ಯಾಲ್ಕುಲೇಟರ್ ಎನಿಸಿದ ಶ್ರೀನಿಧಿ ನೀರಾ ಮಾನ್ವಿ ಅವರನ್ನು ಸನ್ಮಾನಿಸಲಾಯಿತು. ಬಹುಮುಖ ಪ್ರತಿಭೆಯ ಅರ್ಬೆಟ್ಟು ಜ್ಞಾನದೇವ ಕಾಮತ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಚ್.ದೇವರಾಜ ಪಾಣರನ್ನು ಅಭಿನಂದಿಸಲಾಯಿತು.

64ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆಸಿದ ಅಂತರ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾ ಯಿತು. ಎಸ್ಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಉಪವಲಯ ಅರಣ್ಯಾಧಿಕಾರಿಗಳ ಮಕ್ಕಳಿಗೆ ನಗದು ಬುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಕುಂದಾಪುರ ಉಪವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಗೌರವ ವನ್ಯಜೀವಿ ಪರಿಪಾಲಕ ರವಿರಾಜ್ ನಾರಾಯಣ್, ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮುಡೂರ ಕೊಠಾರಿ, ಗೌರವ ಸಲಹೆಗಾರ ಪ್ರಕಾಶ್‌ಚ್ಚಂದ್ರ, ದ.ಕ. ಜಿಲ್ಲಾಧ್ಯಕ್ಷ ಪಿ.ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.

ಉಪಾಧ್ಯಕ್ಷ ನಾಗೇಶ ಬಿಲ್ಲವ ಅತಿಥಿಗಳನ್ನು ಸ್ವಾಗತಿಸಿದರೆ, ಗೌರವ ಸಲಹೆಗಾರರಾದ ಪ್ರಕಾಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News