ಪರ್ಕಳ: ಅಂತರ ಜಿಲ್ಲಾ ಚೆಸ್ ಟೂರ್ನಿ ಉದ್ಘಾಟನೆ

Update: 2019-01-06 14:49 GMT

ಪರ್ಕಳ, ಜ.6: ಚದುರಂಗದಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಪ್ರತಿಯೊಬ್ಬರೂ ಚಾಣಾಕ್ಷರಾಗಿ ಬದುಕಿನ ಎಲ್ಲ ರಂಗಗಳಲ್ಲೂ ಯಶಸ್ಸನ್ನು ಕಾಣಲು ಸಾಧ್ಯವಿದೆ. ಚದುರಂಗದಾಟದ ಪ್ರತಿಯೊಂದು ನಡೆಯು ಬದುಕಿನಲ್ಲಿ ಬರುವ ಎಲ್ಲ ತರದ ಅಡ್ಡಿ-ಆತಂಕಗಳನ್ನು ಯಶಸ್ವಿಯಾಗಿ ಮೆಟ್ಟಿ ನಿಲ್ಲಲು ಸಹಕಾರಿಯಾಗುತ್ತದೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.

ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪರ್ಕಳ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಭವನದಲ್ಲಿ ಇಂದು ಆಯೋಜಿಸಲಾದ ಎಂಟು ಜಿಲ್ಲೆಗಳ ಮಟ್ಟದ ಟೆಸ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಉಜಿರೆಯ ಉದ್ಯಮಿ ಗೋಕುಲ್‌ದಾಸ್ ಭಂಡಾರ್ಕರ್ ಅವರ ಜೊತೆ ಚೆಸ್ ಆಡುವ ಮೂಲಕ ಡಾ.ಪ್ರಸಾದ್ ಸ್ಪರ್ಧೆಯನ್ನು ಉದ್ಘಾಟಿಸಿದರು.

ಉಡುಪಿ ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷ ಡಾ.ರಾಜ್‌ಗೋಪಾಲ ಶೆಣೈ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಚೆಸ್ ಆಟ ಗಮನಾರ್ಹ ಪ್ರಗತಿಯನ್ನು ಕಾಣುತಿದ್ದು, ಇಲ್ಲಿನ ಹಲವು ಮಂದಿ ಆಟಗಾರರು ರಾಷ್ಟ್ರ ಮಟ್ಟದಲ್ಲಿ ಮಿಂಚತೊಡಗಿದ್ದಾರೆ. ಇವರಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಚೆಸ್ ಸಂಸ್ಥೆಯು ಎಪ್ರಿಲ್ ತಿಂಗಳಲ್ಲಿ ಚೆಸ್ ಆಟಗಾರರಿಗೆ ವಿಶೇಷ ತರಬೇತಿ ಶಿಬಿರವೊಂದನ್ನು ಆಯೋಜಿಸಲಿದೆ ಎಂದರು.

ಉದ್ಯಮಿಗಳಾದ ಅನಿಲ್ ಶೆಟ್ಟಿ, ಗೋಕುಲದಾಸ್ ಭಂಡಾರ್ಕರ್, ಜಿಲ್ಲಾ ಚೆಸ್ ಸಂಸ್ಥೆಯ ಉಪಾಧ್ಯಕ್ಷ ಉಮಾನಾಥ ಕೋಟ್ಯಾನ್, ಮಾಹೆ ಸ್ಪೋರ್ಟ್ಸ್ ಕೌನ್ಸಿಲ್‌ನ ಸಹ ಕಾರ್ಯದರ್ಶಿ ಶೋಭಾ ಈರಪ್ಪ, ಉಡುಪಿ ನಗರಸಭಾ ಸದಸ್ಯೆ ಸುಮಿತ್ರಾ ನಾಯಕ್ ಉಪಸ್ಥಿತರಿದ್ದರು.

ನೇಜಾತಿ ಸ್ಪೋಟ್ಸ್ ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News