ಮೀನುಗಾರರನ್ನು ಹಗುರವಾಗಿ ಪರಿಗಣಿಸಿದರೆ ಚುನಾವಣೆಯಲ್ಲಿ ತಕ್ಕಪಾಠ: ಜಿ.ಶಂಕರ್ ಎಚ್ಚರಿಕೆ
ಉಡುಪಿ, ಡಿ.6: ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಆರೋಪ ಹೊರಿಸುವುದು ನಮ್ಮ ಕೆಲಸ ಅಲ್ಲ. ನಮ್ಮದು ರಾಜಕೀಯ ರಹಿತ ಹೋರಾಟ. ಯಾರು ಕೂಡ ಮೀನುಗಾರರನ್ನು ಹಗುರವಾಗಿ ಪರಿಗಣಿಸಬಾರದು. ಮೀನು ಗಾರರು ಯಾವುದೇ ರಾಜಕೀಯ ಪಕ್ಷಗಳ ಕೈಗೊಂಬೆಯಲ್ಲ. ಮೀನುಗಾರರನ್ನು ಹಗುರವಾಗಿ ಕಂಡರೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾ ಗುವುದು ಎಂದು ಮೀನುಗಾರ ಮುಖಂಡ ಜಿ.ಶಂಕರ್ ಹೇಳಿದ್ದಾರೆ.
ಅಂಬಲಪಾಡಿ ಜಂಕ್ಷನ್‌ನಲ್ಲಿ ರವಿವಾರ ನಡೆದ ಮೀನುಗಾರರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಮೀನುಗಾರರ ಜೀವಕ್ಕೆ ಬೆಲೆ ಇಲ್ಲವಾಗಿದೆ. ಎಲ್ಲರು ಪಕ್ಷಬೇಧ ಮರೆತು ಕೆಲಸ ಮಾಡಬೇಕು. ನಾಪತ್ತೆಯಾದ ವರು ಎಲ್ಲಿಗೆ ಹೋಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಿ ಮೂರು ನಾಲ್ಕು ದಿನಗಳಲ್ಲಿ ನಮಗೆ ತೋರಿಸಬೇಕು. ಇಲ್ಲದಿದ್ದರೆ ನಾವೇ ಈ ಪ್ರಕರಣವನ್ನು ಕೈಗೆತ್ತಿಕೊಂಡು ಹುಡುಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಅವಿಭಜಿತ ದ.ಕ. ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮಾತನಾಡಿ, ಮೀನುಗಾರರ ಬದುಕಿನಲ್ಲಿ ಚೆಲ್ಲಾಟ ಆಡಬಾರದು. ಮೀನುಗಾರರಿಗೆ ಭದ್ರತೆ ಒದಗಿಸಬೇಕು. ಮೀನುಗಾರರ ತಾಳ್ಮೆಯನ್ನು ಪರೀಕ್ಷಿಸ ಬೇಡಿ. ರಸ್ತೆಗೆ ಇಳಿದರೆ ಮುಂದಿನ ಪರಿಣಾಮ ಎದುರಿಬೇಕಾಗುತ್ತದೆ ಎಂದು ತಿಳಿಸಿದರು.
ಕಾರವಾರ ಮೀನುಗಾರರ ಫೆಡರೇಶನ್ ಅಧ್ಯಕ್ಷ ಗಣಪತಿ ಮಾಂಬ್ರೆ ಮಾತ ನಾಡಿ, ಇಡೀ ದೇಶವನ್ನು ನಡುಗಿಸುವ ಶಕ್ತಿ ಮೀನುಗಾರರಿಗೆ ಇದೆ. ಕೇಂದ್ರ ಸರಕಾರ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮುಂದೆ ಇದೇ ರೀತಿ ನಿರ್ಲಕ್ಷಿ ಸಿದರೆ ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮೀನುಗಾರರು ನಾಪತ್ತೆಯಾದ ವಿಚಾರ ತಿಳಿದ ತಕ್ಷಣವೇ ಕೇಂದ್ರದ ಸಚಿವರನ್ನು ಭೇಟಿ ಮಾಡಿ, ಆ ಮೂಲಕ ಗೋವಾ, ಮಹಾರಾಷ್ಟ್ರ ಸರಕಾರಗಳಿಗೂ ಸೂಚನೆ ನೀಡಲಾಗಿದೆ. ಹುಡುಕುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಕೇಂದ್ರ ಸರಕಾರ ಏನೆಲ್ಲ ಕೆಲಸ ಮಾಡಬೇಕು, ಅದೆನ್ನೆಲ್ಲ ಮಾಡುತ್ತಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಾವು ಈಗ ಕೇಂದ್ರ, ರಾಜ್ಯ ಸರಕಾರಗಳನ್ನು ದೂರುವ ಕೆಲಸ ಮಾಡಬಾರದು. ಎರಡು ಸರಕಾರಗಳು ಸೇರಿಕೊಂಡು ಕೆಲಸ ಮಾಡಬೇಕಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಿ ದರೆ ದೇವರು ಕೂಡ ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ ತೋರಿರುವುದು ಕಟುಸತ್ಯ. ಇದರ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರೊಳಿಸಬೇಕು ಎಂದು ಒತ್ತಾಯಿಸಿದರು.