ಮಂಗಳೂರು: ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಳ್ಳಲು ಡಿವೈಎಫ್‌ಐ ಮನವಿ

Update: 2019-01-06 15:49 GMT

ಮಂಗಳೂರು, ಜ.6: ದೇಶದ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು, ನಿರುದ್ಯೋಗ, ಬೆಲೆಯೇರಿಕೆಯ ವಿರುದ್ಧ ಕರೆ ನೀಡಿರುವ 48 ಗಂಟೆಗಳ ಸಾರ್ವತ್ರಿಕ ಮುಷ್ಕರವನ್ನು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯು ಪೂರ್ಣವಾಗಿ ಬೆಂಬಲಿಸಲಿದೆ. ಈ ಮುಷ್ಕರವನ್ನು ಜನತೆ ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ಮನವಿ ಮಾಡಿದರು.

ಸಾರ್ವಜನಿಕರು ಮುಷ್ಕರದ ಸಂದರ್ಭ ತಮ್ಮ ವ್ಯಾಪಾರ ವಹಿವಾಟು ಉದ್ಯೋಗಗಳನ್ನು ಸ್ಥಗಿತಗೊಳಿಸಿ, ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಹರತಾಳ ಆಚರಿಸುವ ಮೂಲಕ ಜನವಿರೋಧಿ ಕೇಂದ್ರ ಸರಕಾರಕ್ಕೆ ನಿರ್ಣಾಯಕ ಎಚ್ಚರಿಕೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗದ ಭರವಸೆ ನೀಡಿ ಯುವಜನರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಮೋದಿ ಸರಕಾರದ ತಪ್ಪಾದ ಆರ್ಥಿಕ, ಕೈಗಾರಿಕಾ ನೀತಿಯಿಂದ ಇರುವ ಉದ್ಯೋಗವೂ ನಷ್ಟಗೊಂಡಿದೆ. ನೋಟ್ ಬ್ಯಾನ್, ಜಿಎಸ್‌ಟಿ ನೀತಿಯಿಂದ ಮಾರುಕಟ್ಟೆಗಳು ಕುಸಿದಿವೆ. ಬೆಲೆ ಏರಿಕೆ ಜನತೆಯ ಬದುಕನ್ನು ಇನ್ನಿಲ್ಲದಂತೆ ಕಷ್ಟಕ್ಕೆ ದೂಡಿದೆ ಎಂದು ಹೇಳಿದರು.

ಇಷ್ಟಾದರೂ ದೊಡ್ಡ ಬಂಡವಾಳಗಾರರ ಪರ ನಿಂತಿರುವ ನರೇಂದ್ರ ಮೋದಿ ಆಗಿರುವ ತಪ್ಪುಗಳನ್ನು ಸರಿಪಡಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ವರ್ಗದ ಮಹಾಮುಷ್ಕರ ಜನತೆಯ ಪ್ರತಿರೋಧದ ಮಟ್ಟಿಗೆ ಅತ್ಯಂತ ಮಹತ್ವದ್ದಾಗಿದೆ. ನಾಗರಿಕರು ಒಕ್ಕೊರಲಿನಿಂದ ಮುಷ್ಕರದಲ್ಲಿಪಾಲ್ಗೊಳ್ಳುವ ಮೂಲಕ ಸರಕಾರದ ನೀತಿಗಳಿಗೆ ಎದುರಾಗಿ ಜನತೆಯ ಐಕ್ಯತೆ ಎತ್ತಿ ತೋರಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News