ಆಡಳಿತದ ವಿರುದ್ಧ ಟೀಕೆ: ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಜೆಎನ್‌ಯು ಉಪನ್ಯಾಸಕಿಗೆ ರಜೆ ನಿರಾಕರಣೆ
ಹೊಸದಿಲ್ಲಿ,ಜ.6: ತನಗೆ ಬಂದಿದ್ದ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿಯನ್ನು ಪಡೆಯಲು ರಜೆ ನೀಡಲು ಆಡಳಿತವರ್ಗ ನಿರಾಕರಿಸಿದೆ ಎಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಉಪನ್ಯಾಸಕಿ ಕವಿತಾ ಸಿಂಗ್ ಆರೋಪಿಸಿದ್ದಾರೆ.
ಜೆಎನ್‌ಯುನ ಕಲೆ ಮತ್ತು ಸೌಂದರ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕವಿತಾ ಸಿಂಗ್, 2017ರ ಡಿಸೆಂಬರ್‌ನಲ್ಲಿ ಆಡಳಿತ ಮಂಡಳಿ ಪರಿಚಯಿಸಿದ್ದ ಕಡ್ಡಾಯ ಹಾಜರಿ ನೀತಿಯನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಆಡಳಿತ ವರ್ಗ ಅವರಿಗೆ ರಜೆ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆಂಗ್ಲ ಮಾಧ್ಯಮದ ಜೊತೆ ಮಾತನಾಡಿದ ಸಿಂಗ್, ಇನ್ಫೋಸಿಸ್ ಪ್ರಶಸ್ತಿಯನ್ನು ಸ್ವೀಕರಿಸುವ ಉದ್ದೇಶದಿಂದ ಜನವರಿ 4ರಂದು ರಜೆಗಾಗಿ ಇ-ಆಫೀಸ್ ಮೂಲಕ ಅರ್ಜಿ ಹಾಕಿದ್ದೆ. ಆದರೆ ನನ್ನ ಅರ್ಜಿಯನ್ನು ಉಪಕುಲಪತಿ ಎಂ. ಜಗದೀಶ್ ಕುಮಾರ್ ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕೊಲಂಬಿಯಾದ ಬೊಗೊಟದಲ್ಲಿ ಅತಿಥಿ ಉಪನ್ಯಾಸಕರಾಗಿ ಮತ್ತು ಲಾಸ್ ಏಂಜಲಿಸ್‌ನ ಜೆ. ಪೌಲ್ ಗೆಟ್ಟಿ ಮ್ಯೂಸಿಯಂನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿದ ಸಂದರ್ಭದಲ್ಲೂ ಜೆಎನ್‌ಯು ಆಡಳಿತ ವರ್ಗ ನನ್ನ ಅರ್ಜಿಯನ್ನು ತಳ್ಳಿಹಾಕಿದೆ ಎಂದು ಸಿಂಗ್ ಆರೋಪಿಸಿದ್ದಾರೆ. ಆಡಳಿತ ಮಂಡಳಿಯ ವಿರುದ್ಧ ಮಾತನಾಡಿದ ಕಾರಣಕ್ಕೆ ಕಳೆದ ಮಾರ್ಚ್‌ನಲ್ಲಿ ಅಮಾನತುಗೊಳಿಸಲ್ಪಟ್ಟ ಸಿಬ್ಬಂದಿ ವರ್ಗದ ಏಳು ಮಂದಿಯಲ್ಲಿ ಕವಿತಾ ಸಿಂಗ್ ಒಬ್ಬರು. ನಂತರ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ಸಿಂಗ್ ಸೇರಿದಂತೆ ಐದು ಮಂದಿಯನ್ನು ಮರುನೇಮಕಗೊಳಿಸಲಾಗಿತ್ತು.