‘ಆಧುನಿಕ ಸಮಸ್ಯೆಗಳಿಗೆ ಪ್ರಾಚೀನ ಗ್ರಂಥಗಳಲ್ಲಿ ಪರಿಹಾರ’
ಉಡುಪಿ, ಜ. 6: ಸಂಸ್ಕೃತ ಪ್ರಾಚೀನ ಸಾಹಿತ್ಯಗಳಲ್ಲಿರುವ ಅಗಾಧ ಮಾಹಿತಿಗಳನ್ನು ಬಳಸಿ, ಈಗಿನ ಆಧುನಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕಾಗಿದೆ ಎಂದು ಮೇಲುಕೋಟೆಯ ಹಿರಿಯ ವಿದ್ವಾಂಸ, ಸಂಶೋಧಕ ಡಾ. ಲಕ್ಷ್ಮೀತಾತಾಚಾರ್ಯ ಹೇಳಿದ್ದಾರೆ.
ಪರ್ಯಾಯ ಶ್ರೀಪಲಿಮಾರು ಮಠ, ಭಾರತೀಯ ವಿದ್ವತ್ ಪರಿಷತ್, ಉಡುಪಿಯ ತತ್ತ್ವ ಸಂಶೋಧನಾ ಸಂಸತ್ ಸಂಸ್ಥೆಯ ವತಿಯಿಂದ ಹೊಸದಿಲ್ಲಿಯ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್ ಹಾಗೂ ಹೈದರಾಬಾದ್‌ನ ಇಂಡಿಕ್ ಅಕಾಡೆಮಿಗಳ ಸಹಯೋಗದೊಂದಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ‘ನಿಷ್ಪಕ್ಷಪಾತ ಭಾರತೀಯ ಇತಿಹಾಸ ಮಂಥನ’ (ಡಿಸ್ಪಾಶಿನೇಟ್ ಚರ್ನಿಂಗ್ ಆಫ್ ಇಂಡಾಲಜಿ) ವಿಷಯ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ವಿದ್ವತ್‌ಗೋಷ್ಠಿಯಲ್ಲಿ ರವಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡುತಿದ್ದರು.
ತಾನು ಸಂಸ್ಕೃತದ ಗ್ರಂಥವೊಂದರ ಮಾಹಿತಿಯಿಂದ ರಕ್ಷಣಾ ಸಚಿವಾಲಯಕ್ಕೆ ನೀಡಿದ ಮಾಹಿತಿಯನ್ನು ಅವರು ಉದಾಹರಣೆಯಾಗಿ ನೀಡಿದರು. ಇದು ಅಮೆರಿಕನ್ ಸಂಸೋಧನೆ ಅಥವಾ ಅವರ ತಂತ್ರಜ್ಞಾನಕ್ಕಿಂತ ಉತ್ತಮವಾಗಿ ಎಂದು ಡಾ.ತಾತಾಚಾರ್ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕೆನಡಾದ ಬ್ರಿಟಿಷ್ ಕೊಲಂಬಿಯಾ ವಿ.ವಿ. ಗೌರವ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸ ಪ್ರೊ. ಅಶೋಕ್ ಅಕ್ಲೂಜಕರ್ ಮಾತನಾಡಿ, ಸಂಸ್ಕೃತದ ಅಭಿವೃದ್ಧಿಗೆ ದೇಶದ ಕಾಲೇಜು ಮತ್ತು ವಿಶ್ವವಿದ್ಯಾನಿಲ ಯಗಳ ಸಂಸ್ಕೃತ ಪ್ರಾಧ್ಯಾಪಕರು ತಮ್ಮ ಕೈಲಾದ ಸೇವೆ ಹಾಗೂ ದೇಣಿಗೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.
ಭಾರತೀಯ ಮೂಲದ ಸಂಸ್ಕೃತ ಗ್ರಂಥಗಳಲ್ಲಿರುವ ಒಂದೊಂದು ವಿಷಯ ವನ್ನೂ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಿ ಅವುಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ನಿಧಾನವಾಗಿ ವಿದೇಶೀ ಶೈಲಿಯ ಸಂಸ್ಥೆಗಳು ಕ್ಷೀಣಿಸುತ್ತಿದ್ದು, ಭಾರತೀಯ ಶೈಲಿಯಲ್ಲಿ ಬೋಧನೆಯಲ್ಲಿ ಸಮಗ್ರ ಶಿಕ್ಷಣ ವ್ಯವಸ್ಥೆ ಯನ್ನು ಕಾಪಾಡಿಕೊಳ್ಳಬೇಕು ಎಂದರು.
ಕೊಚ್ಚಿಯ ಚಿನ್ಮಯ ವಿವಿ ಕುಲಪತಿ ಡಾ.ಗೌರಿ ಮಾಹುಲಿಕರ್ ಮಾತನಾಡಿ, ‘ಇಂಡಾಲಜಿ’ ಶಬ್ದದ ಬದಲು ಭಾರತೀಯ ಜ್ಞಾನ ಪದ್ಧತಿ (ಇಂಡಿಯನ್ ನಾಲೆಜ್ಡ್ ಸಿಸ್ಟಮ್) ಎಂದು ಹೆಸರಿಡಬೇಕು. ನಿರ್ಲಕ್ಷಕ್ಕೆ ಒಳಗಾದ ಲಿಪಿಶಾಸ್ತ್ರ, ಆಯುರ್ವೇದ, ಯೋಗ ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಬಿವಿಪಿ ಕಾರ್ಯದರ್ಶಿ ಪ್ರೊ.ನಾಗರಾಜ್ ಪುಟೂರಿ ಠರಾವು ಮಂಡಿಸಿದರು. ಹೈದರಾಬಾದ್ ವಿವಿಯ ಪ್ರೊ.ಜೆ.ಎಸ್.ಆರ್.ಪ್ರಸಾದ್ ಸ್ವಾಗತಿಸಿದರು. ಬಿವಿಪಿ ಮುಖ್ಯಸ್ಥ ಡಾ.ವೀರನಾರಾಯಣ ಪಾಂಡುರಂಗಿ, ಮಾಹೆ ವಿವಿಯ ಡಾ. ಶ್ರೀನಿವಾಸ ಆಚಾರ್ಯ, ಗೌತಮ್ ಕಾರ್ಯಕ್ರಮ ನಿರ್ವಹಿಸಿದರು. ತತ್ವಸಂಶೋಧನ ಸಂಸತ್ ನಿರ್ದೇಶಕ ಡಾ ವಂಶಿ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಕರ್ನಾಟಕ ಸಂಸ್ಕೃತ ವಿವಿಯ ಡಾ.ಶಿವಾನಿ ವಂದಿಸಿದರು.
ಸಮ್ಮೇಳನದ ನಿರ್ಣಯ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಗಳಲ್ಲಿ ಇಂಡಾಲಜಿ ವಿಭಾಗವನ್ನು ತೆರೆದು ಅಧ್ಯಯನಕ್ಕೆ ಅವಕಾಶ ಕೊಡಬೇಕು. ಮೈಸೂರು ವಿ.ವಿ. ಅಧೀನದಲ್ಲಿರುವ ಓರಿಯಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ್ನು ಕರ್ನಾಟಕ ಸಂಸ್ಕೃತ ವಿವಿ ವ್ಯಾಪ್ತಿಗೆ ತರಬೇಕು. ಭಾರತ ಮತ್ತು ವಿದೇಶಗಳಲ್ಲಿರುವ ಹಸ್ತಪ್ರತಿ ಗ್ರಂಥಾಲಯಗಳ ಮಾಹಿತಿಗಳು ಭಾರತೀಯ ಸಂಶೋಧಕರಿಗೆ ಲಭ್ಯವಾಗಬೇಕು. ವಿದೇಶಗಳಲ್ಲಿರುವ ಹಸ್ತಪ್ರತಿಗಳನ್ನು ಭಾರತದ ಗ್ರಂಥಾಲಯಗಳಿಗೆ ತರಲು ಪ್ರಾನಿ, ಸಂಬಂಧಿತರು ಪ್ರಯತ್ನಿಸಬೇಕು