ಜನವಾದಿ ಮಹಿಳಾ ಸಂಘಟನೆಯ ಸಮಾವೇಶ
ಮಂಗಳೂರು, ಜ.6: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಳಪೆ ವಲಯ ಸಮಾವೇಶವು ಬಜಾಲ್ ಪಕ್ಕಲಡ್ಕ ಪಿ. ರಾಮಚಂದ್ರ ರಾವ್ ಭವನದಲ್ಲಿ ಜಿಲ್ಲಾ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ರವಿವಾರ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಳೆದ ನಾಲ್ಕ್ಕೂವರೆ ವರ್ಷಗಳಿಂದ ಆಡಳಿತ ನಡೆಸುವ ಕೇಂದ್ರ ಸರಕಾರವು ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಶೇ.33ರಷ್ಟು ಮಹಿಳಾ ಪ್ರಾತಿನಿಧ್ಯಕ್ಕೆ ಮೀಸಲಾತಿ ನೀಡಬೇಕೆಂಬ ಮಸೂದೆ ನನೆಗುದಿಗೆ ಬಿದ್ದಿದೆ ಎಂದು ದೂರಿದರು.
ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುವ ಎಲ್ಲ ದೌರ್ಜನ್ಯವನ್ನು ತಡೆಗಟ್ಟಿ ಮಹಿಳೆಯರ ಸುರಕ್ಷತೆಯ ಬಗ್ಗೆ ಖಾತರಿ ನೀಡಬೇಕು. ತಿಂಗಳಿಗೆ 18 ಸಾವಿರ ರೂ. ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದರು. ಸಭೆಯಲ್ಲಿ ಶಿಕ್ಷಕಿಯರಾದ ಅಶ್ವಿನಿ ಬಜಾಲ್, ಚಿತ್ರಾ ಬಜಾಲ್, ಪೂರ್ಣಿಮಾ ಬಜಾಲ್ ಮಾತನಾಡಿದರು.
ಮುಂದಿನ ಅವಧಿಗೆ ವಲಯ ಅಧ್ಯಕ್ಷೆಯಾಗಿ ಜಯಲಕ್ಷ್ಮಿ, ಕಾರ್ಯದರ್ಶಿಯಾಗಿ ನಿರ್ಮಲಾ, ಕೋಶಾಧಿಕಾರಿಯಾಗಿ ಬೇಬಿ ಸೇನವ ಸರ್ವಾನುಮತದಿಂದ ಆಯ್ಕೆಯಾದರು. ಸಭೆಯಲ್ಲಿ ಜ.8 ಮತ್ತು 9ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ ನೀಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಬೇಬಿ ಸೇನವ ವಂದಿಸಿದರು.