×
Ad

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್‌ನಲ್ಲಿ ವಿರೋಧಿಸುತ್ತೇವೆ: ಶಿವಸೇನೆ

Update: 2019-01-06 21:54 IST

ಹೊಸದಿಲ್ಲಿ,ಜ.6: ಬಿಜೆಪಿ ಮತ್ತು ಅದರ ಮಿತ್ರಪಕ್ಷ ಶಿವಸೇನೆ ಮಧ್ಯೆ ಬಿರುಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದ್ದು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್‌ ನಲ್ಲಿ ವಿರೋಧಿಸುವುದಾಗಿ ಶಿವಸೇನೆ ರವಿವಾರ ಘೋಷಿಸುವ ಮೂಲಕ ಎರಡೂ ಪಕ್ಷಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ.

ಮಸೂದೆಯನ್ನು ವಿರೋಧಿಸುವಂತೆ ಅಸೊಮ್ ಗಣ ಪರಿಷದ್ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ತಿಳಿಸಿದ್ದಾರೆ. ಈ ಕಾಯ್ದೆಯಡಿ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಕ್ರಮ ವಲಸಿಗರನ್ನು ಅವರ ಧರ್ಮದ ಆಧಾರದಲ್ಲಿ ಭಾರತೀಯ ಪೌರತ್ವ ಪಡೆಯಲು ಅರ್ಹತೆ ನಿರ್ಧರಿಸಲಾಗುತ್ತದೆ.

ಪ್ರಸ್ತಾವಿತ ಕಾನೂನು, ಅಸ್ಸಾಂನ ಜನರ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಾ ಗುರುತನ್ನು ಮತ್ತು ಪರಂಪರೆಯನ್ನು ರಕ್ಷಿಸುವ ಉದ್ದೇಶದಿಂದ ಮಾಡಲಾಗಿರುವ ಅಸ್ಸಾಂ ಒಪ್ಪಂದದಡಿ ಮಾಡಲಾಗಿರುವ ಪ್ರಯತ್ನಗಳನ್ನು ವಿಫಲಗೊಳಿಸಲಿದೆ ಎಂದು ಶಿವಸೇನೆ ಅಭಿಪ್ರಾಯಿಸಿದೆ.

ಎರಡನೆಯದಾಗಿ, ಈ ಮಸೂದೆ ಜಾರಿಯಾದರೆ ಸರ್ವೋಚ್ಚ ನ್ಯಾಯಾಲಯದ ನಿಗಾವಣೆಯಲ್ಲಿ ನಡೆಸಲಾಗಿರುವ ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆ ಅರ್ಥಹೀನವಾಗಲಿದೆ ಎಂದು ಶಿವಸೇನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News