×
Ad

ಫೆಬ್ರವರಿ 1ರಿಂದ ನಿಮ್ಮಿಷ್ಟದ ಚಾನಲ್‌ಗಳಿಗಷ್ಟೇ ಹಣ ಪಾವತಿಸಿ!

Update: 2019-01-06 21:59 IST

ಹೊಸದಿಲ್ಲಿ,ಜ.6: ಕೇಬಲ್ ಟಿವಿ ಗ್ರಾಹಕರು ತಮಗೆ ಬೇಕಾದ ಚಾನಲ್ ‌ಗಳಿಗಷ್ಡೇ ಹಣ ಪಾವತಿಸಬಹುದಾದ ನೂತನ ವ್ಯವಸ್ಥೆ ಫೆಬ್ರವರಿ ಒಂದರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್) ಜಾರಿಗೆ ತಂದಿರುವ ಈ ನೂತನ ವ್ಯವಸ್ಥೆಯ ಗಡುವು ಡಿಸೆಂಬರ್ 29ರಂದೇ ಕೊನೆಯಾಗಿದ್ದರೂ ಹೊಸ ದರ ನಿಗದಿ ಮತ್ತು ಚಾನಲ್‌ಗಳ ಆಯ್ಕೆ ವ್ಯವಸ್ಥೆಯನ್ನು ಪರಿಚಯಿಸಲು ಕೇಬಲ್ ಟಿವಿ ಆಪರೇಟರ್‌ಗಳಿಗೆ ಜನವರಿ 31ರ ವರೆಗೆ ಕಾಲಾವಕಾಶ ನೀಡಿತ್ತು. ಹೊಸ ವ್ಯವಸ್ಥೆಯಲ್ಲಿ ಗ್ರಾಹಕರು ತಮ್ಮಿಷ್ಟದ ಚಾನಲ್‌ಗಳನ್ನು ಆಯ್ಕೆ ಮಾಡುವ ಮತ್ತು ಅವುಗಳಿಗೆ ಮಾತ್ರ ಹಣ ಪಾವತಿಸುವ ಸ್ವಾತಂತ್ರವನ್ನು ಪಡೆಯಲಿದ್ದಾರೆ. ಈ ನಿಯಮದಡಿ ಗ್ರಾಹಕರು ಚಾನಲ್‌ಗಳ ಗುಚ್ಛ ಅಥವಾ ಒಂಟಿ ಚಾನಲ್‌ಗಳಿಗೆ ಮಾತ್ರ ಪಾವತಿಸುವ ಆಯ್ಕೆಯನ್ನು ಪಡೆಯಲಿದ್ದಾರೆ. ಟ್ರಾಯ್ ಪ್ರಕಾರ ಸದ್ಯ ಸ್ಯಾಟಲೈಟ್ ಮತ್ತು ಕೇಬಲ್ ಟಿವಿ ಆಪರೇಟರ್‌ಗಳು ಗ್ರಾಹಕರಿಂದ ಪ್ರತಿ ಚಾನಲ್‌ಗೆ ನಿಗದಿಗಿಂತ ಹಲವು ಪಟ್ಟು ಹೆಚ್ಚು ದರವನ್ನು ಪಡೆಯುತ್ತಿದ್ದಾರೆ.

ಕೆಲವೊಂದು ಕಡೆಗಳಲ್ಲಿ ಈ ದರ ಒಂದು ವಾಹಿನಿಗೆ ಪ್ರತಿ ತಿಂಗಳಿಗೆ 60 ರೂ.ವರೆಗೂ ಇದೆ. ಇದರಿಂದ ಗ್ರಾಹಕರು ವಂಚನೆಗೊಳಾಗುತ್ತಿದ್ದಾರೆ. ನೂತನ ವ್ಯವಸ್ಥೆಯಲ್ಲಿ ವಾಹಿನಿಯೊಂದಕ್ಕೆ ಗರಿಷ್ಠ ದರ 19 ರೂ. ಎಂದು ಟ್ರಾಯ್ ನಿಗದಿಪಡಿಸಿದೆ. ಉಳಿದಂತೆ ಗ್ರಾಹಕರಿಗೆ ವಾಹಿನಿಗಳ ಗುಚ್ಛ ಅಥವಾ ಒಂಟಿ ವಾಹಿನಿಗಳನ್ನು ಪಡೆಯುವ ಅಧಿಕಾರವನ್ನೂ ಪ್ರಸಾರಕರು ನೀಡುವುದು ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News