×
Ad

ಇದು ನಿರೀಕ್ಷಿಸಿರದ ಫಲಿತಾಂಶ: ಕ್ಯಾಟ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪರ್ ಆದ ನಿರಂಜನ ಪ್ರಸಾದ್

Update: 2019-01-06 22:10 IST

ಉಡುಪಿ, ಜ.6: ‘ಈ ಫಲಿತಾಂಶದಿಂದ ಮೊದಲು ನನಗೇ ಆಶ್ಚರ್ಯವಾಯಿತು. ಖಂಡಿತ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ವಿಜ್ಞಾನ ಕ್ಷೇತ್ರವನ್ನು ತೊರೆದು, ಆರ್ಥಿಕ ರಂಗಕ್ಕೆ ಧುಮುಕುವ ಬಗ್ಗೆ ದ್ವಂದ್ವದಲ್ಲಿದ್ದ ನನಗೆ ಇದು ನನ್ನ ದಾರಿಯನ್ನು ಸ್ಪಷ್ಟ ಪಡಿಸಿತು. ಚಿಕ್ಕಂದಿನಿಂದಲೂ ಇಂಜಿನಿಯರಿಂಗ್ ಕಲಿಕೆಗೆ ಒತ್ತು ನೀಡಿದ್ದರೂ, ತಂದೆಯ ಪ್ರಭಾವದಿಂದ ಆರ್ಥಿಕ ವಿಷಯಗಳಲ್ಲೂ ನನಗೆ ವಿಶೇಷ ಆಸಕ್ತಿ ಮೂಡಿತ್ತು.’ ಎಂದು ನಿರಂಜನ ಪ್ರಸಾದ್ ‘ವಾರ್ತಾಭಾರತಿ’ಯೊಂದಿಗೆ ಮಾತನಾಡುತ್ತಾ ತಿಳಿಸಿದರು.

ದೇಶದ ಪ್ರತಿಷ್ಠಿತ ಬ್ಯುಸಿನೆಸ್ ವಿದ್ಯಾಸಂಸ್ಥೆಗಳಾದ ಐಐಎಂ ಹಾಗೂ ಇತರ ಪ್ರಮುಖ ಬ್ಯುಸಿನೆಸ್ ಸ್ಕೂಲ್‌ಗಳ ಪ್ರವೇಶಕ್ಕಾಗಿ ನಡೆದ ಕ್ಯಾಟ್ (ಸಾಮಾನ್ಯ ಪ್ರವೇಶ ಪರೀಕ್ಷೆ)ನಲ್ಲಿ ಉಡುಪಿಯ ನಿರಂಜನ ಪ್ರಸಾದ್  ಶೇ.100 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.

ಮೂಲತ: ಉಡುಪಿಯವರಾಗಿದ್ದು ಈಗ ಚೆನ್ನೈನ ಐಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಐದು ವರ್ಷಗಳ ಡ್ಯುಯೆಲ್ ಡಿಗ್ರಿ (ಬಿ.ಟೆಕ್ ಹಾಗೂ ಎಂ.ಟೆಕ್ ಒಟ್ಟಿಗೆ)ಯ ಅಂತಿಮ ವರ್ಷದಲ್ಲಿ ಓದುತ್ತಿದ್ದಾರೆ.

‘ಕಾಸು-ಕುಡಿಕೆ’ ಅಂಕಣದ ಮೂಲಕ ನಾಡಿನಾದ್ಯಂತ ಚಿರಪರಿಚಿತರಾಗಿರುವ ಆರ್ಥಿಕ ತಜ್ಞ, ಆರ್ಥಿಕ ವಿಶ್ಲೇಷಕ ಜಯದೇವ ಪ್ರಸಾದ್ ಮೊಳೆಯಾರ್ ಹಾಗೂ ಮಾಹೆ ವಿವಿಯಲ್ಲಿ ಪ್ರಾಧ್ಯಾಪಕಿಯಾಗಿರುವ ಕೀರ್ತನಾ ಪ್ರಸಾದ್ ಅವರ ಪುತ್ರರೇ ನಿರಂಜನ ಪ್ರಸಾದ್. ಮೊಳೆಯಾರ್ ಈಗ ಮೂಡಬಿದರೆಯ ಮೈಟ್ ಸಂಸ್ಥೆಯಲ್ಲಿ ಎಂಬಿಎ ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಐಐಎಂನ ಪ್ರವೇಶಕ್ಕಾಗಿ ಕಳೆದ ನವೆಂಬರ್ 25ರಂದು ಕ್ಯಾಟ್ ಪರೀಕ್ಷೆ ನಡೆದಿದ್ದು, ಅದರ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದೆ. ಇದರಲ್ಲಿ ಪರೀಕ್ಷೆ ಬರೆದ ಸುಮಾರು ಮೂರು ಲಕ್ಷ ಮಂದಿಯಲ್ಲಿ 11 ಮಂದಿ ಶೇ.100 ಅಂಕಗಳನ್ನು ಪಡೆದಿದ್ದು, ಇವರಲ್ಲಿ ನಿರಂಜನ ಪ್ರಸಾದ್ ಸಹ ಒಬ್ಬರು. ಸದ್ಯಕ್ಕೆ ತಿಳಿದುಬಂದಂತೆ ಕರ್ನಾಟಕದಿಂದ ಈ ಸಾಧನೆ ಮಾಡಿದ ಏಕೈಕ ವಿದ್ಯಾರ್ಥಿ ಇವರಾಗಿದ್ದಾರೆ.

ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗಿನ ವಿದ್ಯಾಭ್ಯಾಸ ಮಾಡಿರುವ ನಿರಂಜನ ಪ್ರಸಾದ್, ಮುಂದೆ ಜೆಇಇ ಮೂಲಕ ಪ್ರತಿಷ್ಠಿತ ಮದ್ರಾಸ್‌ನ ಐಐಟಿಯಲ್ಲಿ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದರು. ಇದೀಗ ಐದು ವರ್ಷಗಳ ಡ್ಯುಯೆಲ್ ಡಿಗ್ರಿಯನ್ನು ಪಡೆಯುವ ಸನಿಹದಲ್ಲಿರುವ ಅವರು ತಮ್ಮ ಭವಿಷ್ಯವನ್ನು ಇಂಜಿನಿಯರಿಂಗ್ ನಿಂದ ಆರ್ಥಿಕ ಕ್ಷೇತ್ರದಲ್ಲಿ ಅರಸಲು ಮುಂದಾಗಿದ್ದಾರೆ.

ನನ್ನ ಫಲಿತಾಂಶದಿಂದ ತಂದೆಯವರು ಸಹಜವಾಗಿ ಖುಷಿಯಾಗಿದ್ದಾರೆ. ಹೆಚ್ಚಾಗಿ ಇಂಜಿನಿಯರಿಂಗ್ ಪದವಿ ಪಡೆದವರು ಒಂದೆರಡು ವರ್ಷ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಬಳಿಕ ಎಂಬಿಎ ಕಲಿಕೆಗೆ ಮುಂದಾಗುತ್ತಾರೆ. ಆದರೆ ನನಗೀಗ ಶೇ.100 ಅಂಕಗಳು ಸಿಕ್ಕಿರುವುದರಿಂದ, ಈಗ ಬಿಟ್ಟರೆ ಮುಂದೆ, ಇದೇ ಸಾಧನೆಯನ್ನು ಪುನರಾವರ್ತಿಸುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ ನನ್ನ ಇಂಜಿನಿಯರಿಂಗ್ ಕಲಿಕೆ ಮುಗಿದ ತಕ್ಷಣ ತಂದೆ-ತಾಯಿಯವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

‘ಇತ್ತೀಚಿನ ದಿನಗಳಲ್ಲಿ ಅರ್ಥಶಾಸ್ತ್ರದಲ್ಲೂ ನನಗೆ ಆಸಕ್ತಿ ಮೂಡಿತ್ತು. ಹೀಗಾಗಿ ದೇಶದ ಅಗ್ರಗಣ್ಯ ಮ್ಯಾನೇಜ್‌ಮೆಂಟ್ ಸಂಸ್ಥೆಯಾದ ಅಹಮದಾಬಾದ್‌ನ ಐಐಎಂನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಮುಂದೆ ದೇಶದ ಆರ್ಥಿಕ ಕ್ಷೇತ್ರದ ಬೆಳವಣಿಗೆಯಲ್ಲಿ ನನ್ನ ಕೈಲಾದ ಕೊಡುಗೆ ನೀಡುವ ಪ್ರಯತ್ನ ನಡೆಸುತ್ತೇನೆ.’ ಎಂದು ನಿರಂಜನ ಪ್ರಸಾದ್ ತಿಳಿಸಿದರು.

ಕ್ಯಾಟ್ ಪರೀಕ್ಷೆಗೆ ನಾನು ವಿಶೇಷವಾದ ಯಾವುದೇ ಸಿದ್ಧತೆ ನಡೆಸಿರಲಿಲ್ಲ. ಕೋಚಿಂಗ್ ಸಹ ಪಡೆದಿರಲಿಲ್ಲ. ತಂದೆಯವರೊಂದಿಗೆ ವಿಷಯದ ಕುರಿತು ಚರ್ಚಿಸುತಿದ್ದೆ. ಅವರು ಆರ್ಥಿಕ ತಜ್ಞರಾಗಿದ್ದರಿಂದ ನನಗೆ ಅದರಿಂದ ಅನುಕೂಲವಾಯಿತು ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News