ಬಾಲಕರ ಮೇಲಿನ ಲೈಂಗಿಕ ಶೋಷಣೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಹಕ್ಕೋತ್ತಾಯ
ಕುಂದಾಪುರ, ಜ. 7: ಕುಂದಾಪುರ ಮತ್ತು ಬೈಂದೂರು ತಾಲೂಕಿನಲ್ಲಿ ಗಂಡು ಮಕ್ಕಳ ಮೇಲೆ ಲೈಂಗಿಕ ಶೋಷಣೆ ನಡೆಸಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸ ಬೇಕು ಎಂದು ಆಗ್ರಹಿಸಿ ಕುಂದಾಪುರ ತಾಲೂಕಿನ 62 ಗ್ರಾಪಂಗಳ ಮಕ್ಕಳ ಹಾಗೂ ಮಹಿಳಾ ಮಿತ್ರರ ಸಂಘಟನೆಯು ಹಕ್ಕೊತ್ತಾಯ ಪತ್ರವನ್ನು ಕುಂದಾ ಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷ ದಿನೇಶ್ ಕುಮಾರ್ ಅವರಿಗೆ ಇಂದು ಸಲ್ಲಿಸಿದರು.
ಗಂಡು ಮಕ್ಕಳ ಮೇಲೆ ಆಗಿರುವ ಶೋಷಣೆಯು ಅತ್ಯಂತ ಖಂಡನೀಯ. ಈ ಪ್ರಕರಣ ಯಾವುದೇ ಕಾರಣಕ್ಕೂ ನನೆಗುದಿಗೆ ಬೀಳದೆ ಮಕ್ಕಳಿಗೆ ನ್ಯಾಯ ಸಿಗಬೇಕು. ಯಾವುದೇ ಒತ್ತಡಕ್ಕೆ ಮಣಿದು ಈ ಪ್ರಕರಣವು ದಿಕ್ಕು ತಪ್ಪದಂತೆ ನೋಡಿಕೊಳ್ಳಬೇಕು. ಮುಂದೆ ಇಂತಹ ಕೃತ್ಯ ಎಸಗದಂತೆ ಮಾದರಿಯಾಗುವ ರೀತಿಯಲ್ಲಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರುವ ಮಕ್ಕಳು ಹಾಗೂ ಪೋಷಕರಿಗೆ ಅಗತ್ಯ ರಕ್ಷಣೆ, ಮಾನಸಿಕ ಸ್ಥೈರ್ಯ ಮೂಡಿಸುವಂತಹ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಶೋಷಿತ ಮಕ್ಕಳಿಗೆ ಅನ್ಯಾಯವಾಗದಂತೆ ಈ ಪ್ರಕರಣದ ವಿಚಾರಣೆಯ ಎಲ್ಲ ಹಂತದಲ್ಲೂ ನಿಗಾ ವಹಿಸಬೇಕು. ಮಕ್ಕಳಿಗೆ ಹಾಗೂ ಪೋಷಕರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಬರುವಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ಸಿಗದಂತೆ ಮಾಡಬೇಕು. ಇಂತಹ ಪ್ರಕರಣಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ, ಆತ್ಮಸ್ಥೈರ್ಯ ತುಂಬುವ ಕಾರ್ಯಾಗಾರಗಳನ್ನು ಹಮ್ಮಿ ಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ದೇವಿ ಗೋಳಿಹೊಳೆ, ಗೌರಿ ಶ್ರೀಯಾನ್ ಕಾರ್ವಡಿ, ಅಮೀರ್ ಬಾಷಾ, ಪ್ರಭಾಕರ್ ನಾಯ್ಕ, ರಾಜೇಂದ್ರ ಬಿಜೂರು, ಶರತ್ ಮೊವಾಡಿ, ಅಶೋಕ್ ಬಳೆಗಾರ್, ಅನಿತಾ ಆರ್.ಕೆ. ಮರವಂತೆ ಮೊದಲಾದವರು ಉಪಸ್ಥಿತರಿದ್ದರು.