ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ತನಿಖೆಗೆ ಹಾಜರಾದ ಚಿದಂಬರಂ

Update: 2019-01-07 14:48 GMT

ಹೊಸದಿಲ್ಲಿ, ಜ.7: ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇಡಿ)ದ ಎದುರು ಸೋಮವಾರ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ತನಿಖೆಗೆ ಹಾಜರಾದರು. ಈ ಪ್ರಕರಣದಲ್ಲಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಹಣ ಅಕ್ರಮ ಸಾಗಣೆ ಪ್ರಕರಣದಲ್ಲಿ ಪಿ.ಚಿದಂಬರಂ ಪಾತ್ರವಿದ್ದು, ಈ ಕುರಿತು ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದ ಸಿಬಿಐ ಹಾಗೂ ಇಡಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿತ್ತು. ಬಳಿಕ ನಿರೀಕ್ಷಣಾ ಜಾಮೀನಿಗೆ ಚಿದಂಬರಂ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ದಿಲ್ಲಿ ಹೈಕೋರ್ಟ್ ಜನವರಿ 15ರವರೆಗೆ ಚಿದಂಬರಂ ರನ್ನು ಬಂಧಿಸದಂತೆ ತಿಳಿಸಿತ್ತು ಮತ್ತು ತನಿಖೆಗೆ ಸಹಕರಿಸುವಂತೆ ಚಿದಂಬರಂಗೆ ಸೂಚಿಸಿತ್ತು.

ಇದೇ ಪ್ರಕರಣದಲ್ಲಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು 2018ರ ಫೆ.28ರಂದು ಬಂಧಿಸಲಾಗಿತ್ತು. ಬಳಿಕ ಅವರನ್ನು ಜಾಮೀನು ಮೇರೆಗೆ ಬಿಡುಗಡೆಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂಗೆ ಸೇರಿದ್ದ 54 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮತ್ತು ಸಂಸ್ಥೆಯೊಂದನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News