×
Ad

ಉಡುಪಿ: ​ಎರಡು ದಿನಗಳ ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳ ಬೆಂಬಲ

Update: 2019-01-07 20:20 IST

ಉಡುಪಿ, ಜ.7: ಕೇಂದ್ರ ಸರಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮತ್ತು ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶದ 10 ಕೇಂದ್ರ ಕಾರ್ಮಿಕ ಸಂಘಟನೆಗಳು, ಬ್ಯಾಂಕ್, ವಿಮೆ, ಬಿಎಸ್ಸೆನ್ನೆಲ್ ಸಂಘಟನೆಗಳು ಕರೆ ನೀಡಿರುವ ಜ.8 ಮತ್ತು 9ರ ಭಾರತ ಬಂದ್‌ಗೆ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಉಡುಪಿ ಜಿಲ್ಲೆಯ ಹೊಟೇಲ್ ಮಾಲಕರ ಸಂಘ ಬಂದ್‌ಗೆ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿರುವುದಾಗಿ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಇದರಿಂದ ಜಿಲ್ಲೆಯ ಹೆಚ್ಚಿನ ಹೊಟೇಲ್‌ಗಳು ಬಂದ್‌ನಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಬಂದ್‌ಗೆ ಈಗಾಗಲೇ ಬ್ಯಾಂಕ್ ನೌಕರರ, ವಿಮಾ ನೌಕರರ ಹಾಗೂ ಬಿಎಸ್‌ಎನ್‌ಎಲ್ ನೌಕರರ ಸಂಘಗಳು ತಮ್ಮ ಬೆಂಬಲ ಘೋಷಿಸಿರುವು ದರಿಂದ ಎರಡು ದಿನಗಳ ಕಾಲ ಜಿಲ್ಲೆಯ ಹೆಚ್ಚಿನೆಲ್ಲಾ ಬ್ಯಾಂಕ್ ಹಾಗೂ ಎಲ್ಲೈಸಿ ಸಿಬ್ಬಂದಿಗಳು ಬಂದ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಉಡುಪಿ ಜಿಲ್ಲಾ ಸರಕಾರಿ ನೌಕರ ಸಂಘ ಬಂದ್‌ಗೆ ಬೆಂಬಲ ಘೋಷಿಸಿಲ್ಲ. ಆದರೆ ಬೆಂಗಳೂರಿನಿಂದ ರಾಜ್ಯ ಸರಕಾರಿ ನೌಕರರ ಒಕ್ಕೂಟ ಬಂದ್‌ಗೆ ಬೆಂಬಲವನ್ನು ಸಾರಿದೆ.

ನೌಕರರ ಬೆಂಬಲ, ಮಾಲಕರದಿಲ್ಲ: ಜಿಲ್ಲೆಯ ಖಾಸಗಿ ಸಿಟಿ, ಸರ್ವಿಸ್ ಹಾಗೂ ಎಕ್ಸ್‌ಪ್ರೆಸ್ ಬಸ್‌ಗಳ ಮಾಲಕರ, ಕೆನರಾ ಬಸ್ ಮಾಲಕರ ಸಂಘ ಹಾಗೂ ಉಡುಪಿ ಸಿಟಿ ಬಸ್ ಮಾಲಕರ ಸಂಘಗಳು ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಸಾರಿದ್ದರೆ, ನೌಕರರು ಸಂಘಟನೆಗಳು ಬಂದ್‌ನ್ನು ಬೆಂಬಲಿಸುವುದಾಗಿ ಘೋಷಿಸಿವೆ.

ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ ಸುರೇಶ್ ನಾಯಕ್ ಕುಯಿಲಾಡಿ, ನಮಗೆ ಕೆಲವು ಸಮಸ್ಯೆಗಳಿವೆಯಾದರೂ ಬಂದ್‌ಗೆ ನಮ್ಮ ಬೆಂಬಲವಿಲ್ಲ. ಮಂಗಳವಾರ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳ ಮೂಲಕ ಬಸ್ ಗಳನ್ನು ಓಡಿಸಲಾಗುವುದು. ಚಾಲಕರು ಮತ್ತು ನಿರ್ವಾಹಕರು ಬಾರದಿದ್ದರೆ ಬಸ್ ಓಡುವುದಿಲ್ಲ ಎಂದರು.

ಮಂಗಳವಾರ ಬಸ್‌ಗಳು ಸಂಚರಿಸಿ, ಯಾರಾದರೂ ಕಲ್ಲುತೂರಿ, ಬಸ್‌ಗೆ ಹಾನಿ ಯುಂಟು ಮಾಡಿದರೆ, ನ್ಯಾಯಾಲಯದ ತೀರ್ಪಿನಂತೆ ನಾವು ಬಂದ್‌ನ ಸಂಘಟಕರಿಂದ ಆದ ಹಾನಿಯನ್ನು ಭರಿಸುವಂತೆ ಆಗ್ರಹಿಸಿ ಈ ಬಾರಿ ನ್ಯಾಯಾಲಯದ ಮೆಟ್ಟಲೇರಲು ನಿರ್ಧರಿಸಿದ್ದೇವೆ ಎಂದು ಸುರೇಶ್ ನಾಯಕ್ ತಿಳಿಸಿದರು.

ಅಂಚೆ ನೌಕರರು: ಅಖಿಲ ಭಾರತ ಅಂಚೆ ನೌಕರರ ಸಂಘ, ಪೋಸ್ಟ್‌ಮನ್ ಮತ್ತು ಎಂಪಿಎಸ್ ಸಂಘ ಭಾರತ್ ಬಂದ್‌ಗೆ ಬೆಂಬಲವನ್ನು ಘೋಷಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ವಿಜಯ ನಾಯರಿ, ಉಮೇಶ್ ನಾಯಕ್, ಸುಬ್ಬು ಮಣಿಪಾಲ, ಕೃಷ್ಣ ಶೆಟ್ಟಿಗಾರ್, ಶ್ರೀಕಾಂತ್ ಭಟ್, ಲಕ್ಷ್ಮಣ, ಸೂರ್ಯ ನಾರಾಯಣ ರಾವ್ ತಿಳಿಸಿದ್ದಾರೆ.

ಇಂಟಕ್, ಸಿಐಟಿಯು, ಎಐಟಿಯುಸಿ ಮುಂತಾದ ಅಖಿಲ ಭಾರತ ಮಟ್ಟದ ಸಂಘಟನೆಗಳೊಂದಿಗೆ ಬ್ಯಾಂಕ್, ವಿಮೆ ಹಾಗೂ ಬಿಎಸ್‌ಎನ್‌ಎಲ್, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರ ಸಂಘಟನೆಗಳು ತಮ್ಮ ಬೆಂಬಲವನ್ನು ಘೋಷಿಸಿ ರುವ ಹಿನ್ನೆಲೆಯಲ್ಲಿ ಭಾರತ್ ಬಂದ್ ಯಶಸ್ವಿಗೊಳ್ಳುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಸಂಚಾಲಕ ಕೆ.ಶಂಕರ್ ತಿಳಿಸಿದ್ದಾರೆ.

ಅದೇ ರೀತಿ ಜಿಲ್ಲೆಯ ರೈತರು, ಕಾರ್ಮಿಕರು, ಸಿಟಿ ಹಾಗೂ ಸರ್ವಿಸ್ ಬಸ್‌ಗಳ ಸಿಬ್ಬಂದಿಗಳು, ಸರಕಾರಿ ನೌಕರರು ಸಹ ಬಂದ್‌ಗೆ ಬೆಂಬಲವನ್ನು ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ನಾವು ಈಗಾಗಲೇ ಮನವಿ ಮಾಡಿ ದ್ದೇವೆ. ಅದೇ ರೀತಿ ಬಂದ್‌ಗೆ ಬೆಂಬಲ ನೀಡುವಂತೆ ನಾವು ಸಾರ್ವಜನಿಕರಲ್ಲೂ ವಿನಂತಿಸಿದ್ದೇವೆ. ಇವರೆಲ್ಲರ ಸಹಕಾರದಿಂದ ಮುಷ್ಕರ, ಹರತಾಳವಾಗಿ ಯಶಸ್ಸು ಕಾಣುವ ಸಾಧ್ಯತೆ ಇದೆ ಎಂದು ಕೆ.ಶಂಕರ್ ವಿವರಿಸಿದರು.

ಕಾರ್ಮಿಕರ ಮೆರವಣಿಗೆ, ಪ್ರತಿಭಟನಾ ಸಭೆ: ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ದೇಶದ ಹತ್ತು ಪ್ರಮುಖ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಉಡುಪಿಯಲ್ಲಿ ನಾಳೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ಬೆಳಗ್ಗೆ 10 ಗಂಟೆಗೆ ಅಜ್ಜರಕಾಡಿನ ಎಲ್‌ಐಸಿ ಕಛೇರಿಯ ಆವರಣದಿಂದ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಶಂಕರ್ ತಿಳಿಸಿದ್ದಾರೆ.

ಈ ಮೆರವಣಿಗೆ ಜೋಡುಕಟ್ಟೆ. ಕೆ.ಎಂ. ಮಾರ್ಗ ಮೂಲಕ ಸಾಗಿ ಸರ್ವಿಸ್ ಬಸ್ ನಿಲ್ದಾಣದ ಮಹಾತ್ಮ ಗಾಂಧಿ ಪ್ರತಿಮೆ ಸುತ್ತುವರಿದು, ಬಿಎಸ್‌ಎನ್‌ಎಲ್ ಕಚೇರಿ ರಸ್ತೆಯಿಂದ ಕಾರ್ಪೋರೇಶನ್ ಬ್ಯಾಂಕಿನ ಕಚೇರಿಯ ಆವರಣದಲ್ಲಿ ಸಮಾಪನಗೊಳ್ಳಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News