ರದ್ದುಗೊಳಿಸಲಾದ ಸೆಕ್ಷನ್‌ನಡಿ ಬಂಧನಕ್ಕೆ ಆದೇಶಿಸಿದರೆ ಅಧಿಕಾರಿಗಳಿಗೆ ಜೈಲು

Update: 2019-01-07 14:58 GMT

ಹೊಸದಿಲ್ಲಿ, ಜ.7: ಸೈಬರ್ ಅಪರಾಧ ಹಾಗೂ ಇ-ಕಾಮರ್ಸ್ ವಂಚನೆ ಪ್ರಕರಣಗಳ ಕುರಿತಾದ ಐಟಿ ಕಾಯ್ದೆಯ 66ಎ ಪರಿಚ್ಛೇದವನ್ನು ರದ್ದುಗೊಳಿಸಿದ್ದರೂ, ಕೆಲವು ಪ್ರಕರಣಗಳಿಗೆ ಇದನ್ನು ಅನ್ವಯಿಸಿ ಆರೋಪಿಗಳನ್ನು ಬಂಧಿಸುತ್ತಿರುವ ಕುರಿತು ಸುಪ್ರೀಂಕೋರ್ಟ್ ಸೋಮವಾರ ಸರಕಾರವನ್ನು ಟೀಕಿಸಿದೆ.

66ಎ ಪರಿಚ್ಛೇದವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ತಿಳಿಸಿದೆ. ಈ ಪರಿಚ್ಚೇದದಡಿ ಬಂಧನಕ್ಕೆ ಆದೇಶಿಸುವ ಅಧಿಕಾರಿಗಳನ್ನು ಜೈಲಿಗೆ ಹಾಕಲಾಗುವುದು ಎಂದು ಸುಪ್ರೀಂ ಎಚ್ಚರಿಸಿದೆ.

ಸುಳ್ಳು ಮತ್ತು ದುರುದ್ದೇಶಪೂರಿತ ವಿಷಯಗಳನ್ನು ಪ್ರಸಾರ ಮಾಡುವವರಿಗೆ 3 ವರ್ಷ ಜೈಲುಶಿಕ್ಷೆ ವಿಧಿಸಲು ಅವಕಾಶ ನೀಡುವ ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯ 66(ಎ) ಪರಿಚ್ಛೇದವನ್ನು 2015ರಲ್ಲಿ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಪರಿಚ್ಛೇದವು ಮುಕ್ತ ವಾಕ್‌ ಸ್ವಾತಂತ್ರ್ಯದ ಮೇಲೆ ನಡೆಸುವ ಸ್ವೇಚ್ಛಾನುಸಾರ, ಮಿತಿ ಮೀರಿದ ಮತ್ತು ಅನುಚಿತ ಆಕ್ರಮಣವಾಗಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಆದರೆ ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ಸೆಕ್ಷನ್ 66(ಎ)ಯಡಿ 22ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಗುರಿಯಾಗಿಸಿದೆ ಎಂದು ಸಮಾಜ ಸೇವಾ ಸಂಸ್ಥೆಯಾಗಿರುವ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದೆ.

 ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂಕೋರ್ಟ್, ಸಂವಿಧಾನ ಬಾಹಿರ ಎಂದು ಘೋಷಿಸಲಾಗಿರುವ ಸೆಕ್ಷನ್ 66(ಎ)ಯಡಿ ಜನರನ್ನು ಬಂಧಿಸಿರುವುದು ನಿಜವಾದರೆ ಇದೊಂದು ಆಘಾತಕಾರಿ ವಿಷಯವಾಗಿದೆ ಮತ್ತು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, ಉತ್ತರಿಸಲು ಕೇಂದ್ರ ಸರಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News