ಕೇಂದ್ರ ಸರಕಾರದ ವಿರುದ್ಧ ಆಕ್ರೋಶ: 20 ಕೋಟಿ ಕಾರ್ಮಿಕರ ಬಂದ್ ಇದು..

Update: 2019-01-07 16:14 GMT

ಹೊಸದಿಲ್ಲಿ,ಜ.7: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು ಏಕಪಕ್ಷೀಯ ಕಾರ್ಮಿಕ ಸುಧಾರಣೆಗಳ ವಿರುದ್ಧ ದೇಶದ 20 ಕೋಟಿ ಕಾರ್ಮಿಕರು ಮಂಗಳವಾರದಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬಂದ್ ಆಚರಿಸುವುದಾಗಿ ಕೇಂದ್ರ ವ್ಯಾಪಾರ ಒಕ್ಕೂಟ ತಿಳಿಸಿದೆ.

ಹತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಎರಡು ದಿನಗಳ ರಾಷ್ಟ್ರವ್ಯಾಪಿ ಬಂದ್‌ಗೆ ಕೈಜೋಡಿಸಿವೆ. 20 ಕೋಟಿ ಕಾರ್ಮಿಕರು ಈ ಬಂದ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಔಪಚಾರಿಕ ಮತ್ತು ಅನೌಪಚಾರಿಕ ವಲಯದ ಕಾರ್ಮಿಕರು ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಇದೇ ಮೊದಲ ಬಾರಿ ಬಂದ್ ಆಚರಿಸುತ್ತಿದ್ದಾರೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್‌ಜೀತ್ ಕೌರ್ ತಿಳಿಸಿದ್ದಾರೆ.

ದೂರಸಂಪರ್ಕ, ಆರೋಗ್ಯ, ಶಿಕ್ಷಣ, ಕಲ್ಲಿದ್ದಲು, ಸ್ಟೀಲ್, ವಿದ್ಯುಚ್ಛಕ್ತಿ, ಬ್ಯಾಂಕಿಂಗ್, ವಿಮೆ ಮತ್ತು ಸಾರಿಗೆ ಹಾಗೂ ಇತರ ಕ್ಷೇತ್ರಗಳ ಕಾರ್ಮಿಕರು ಬಂದ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ ಎಂದು ಕೌರ್ ತಿಳಿಸಿದ್ದಾರೆ. ಕಾರ್ಮಿಕ ನೀತಿಯ ಬಗ್ಗೆ ನಾವು ಸಲಹೆಗಳನ್ನು ನೀಡಿದ್ದೆವು. ಆದರೆ ಚರ್ಚೆಯ ವೇಳೆ ವ್ಯಾಪಾರ ಒಕ್ಕೂಟಗಳ ಬೇಡಿಕೆಗಳನ್ನು ತಿರಸ್ಕರಿಸಲಾಯಿತು. ಸೆಪ್ಟಂಬರ್ 2, 2016ರಂದು ನಾವು ಪ್ರತಿಭಟನೆ ನಡೆಸಿದೆವು. 2017ರ ನವೆಂಬರ್ 9ರಿಂದ 11ರ ವರೆಗೆ ಮೂರು ದಿನಗಳ ಧರಣಿಯನ್ನೂ ನಡೆಸಿದೆವು. ಆದರೆ ಸರಕಾರ ನಮ್ಮ ಜೊತೆ ಮಾತುಕತೆ ನಡೆಸಲು ಮುಂದಾಗಲಿಲ್ಲ. ಬದಲಿಗೆ ಏಕಪಕ್ಷೀಯವಾಗಿ ಕಾರ್ಮಿಕ ಸುಧಾರಣೆಗಳನ್ನು ಪರಿಚಯಿಸಲು ಮುಂದಾಯಿತು ಎಂದು ಕೌರ್ ಆರೋಪಿಸಿದ್ದಾರೆ.

ಇಂಟಕ್, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಮುಂತಾದ ಕೇಂದ್ರ ವ್ಯಾಪಾರ ಒಕ್ಕೂಟಗಳು ಬಂದ್‌ನಲ್ಲಿ ಭಾಗವಹಿಸಲಿವೆ. ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಭಾರತೀಯ ಮಜ್ದೂರ್ ಸಂಘ ಮಾತ್ರ ಬಂದ್‌ನಿಂದ ಹೊರಗುಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News