ನಯನತಾರಾ ಸೆಹಗಲ್ ರಿಗೆ ನೀಡಲಾಗಿದ್ದ ಆಹ್ವಾನ ರದ್ದು: ವ್ಯಾಪಕ ಆಕ್ರೋಶ

Update: 2019-01-07 16:29 GMT

ಮುಂಬೈ,ಜ.7: ಖ್ಯಾತ ಸಾಹಿತಿ ನಯನತಾರಾ ಸೆಹಗಲ್ ಅವರಿಗೆ ನೀಡಲಾಗಿದ್ದ ಆಹ್ವಾನವನ್ನು ರದ್ದುಗೊಳಿಸಿರುವ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಆಯೋಜಕರ ನಿರ್ಧಾರದ ಬಗ್ಗೆ ರಾಜಕೀಯ ನಾಯಕರು ಮತ್ತು ಸಾಹಿತಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

91ರ ಹರೆಯದ ನಯನತಾರಾ ಸೆಹಗಲ್ ಪ್ರಶಸ್ತಿ ವಾಪಸಿ ಅಭಿಯಾನದ ಮುಂಚೂಣಿಯಲ್ಲಿದ್ದರು. ಸಾಹಿತ್ಯ ಸಮ್ಮೇಳನಕ್ಕೆ ಸೆಹಗಲ್ ಆಗಮಿಸಿದರೆ ಕಾರ್ಯಕ್ರಮ ನಡೆಯದಂತೆ ತಡೆಯುವುದಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆಯೋಜಕರು ಈ ನಿರ್ಧಾರವನ್ನು ತಳೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಸಮ್ಮೇಳನದಲ್ಲಿ ಸೆಹಗಲ್ ಭಾಗವಹಿಸುವುದರ ವಿರುದ್ಧ ಪಕ್ಷದ ಸ್ಥಳೀಯ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಪಕ್ಷದ ಮುಖ್ಯಸ್ಥನಾಗಿ ನಾನು ಅವರ ಆಗಮನವನ್ನು ವಿರೋಧಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಖ್ಯಾತ ಇಂಗ್ಲಿಷ್ ಸಾಹಿತಿಯಾಗಿರುವ ನಯನತಾರಾ ಸೆಹಗಲ್ ಜನವರಿ 11ರಂದು ನಡೆಯಲಿರುವ 92ನೇ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪಸ್ಥಿತಿಯಲ್ಲಿ ಯವತ್ಮಲ್ ಜಿಲ್ಲೆಯಲ್ಲಿ ಉದ್ಘಾಟಿಸಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News