×
Ad

ಸಾಲಮನ್ನಾದಿಂದ ಬ್ಯಾಂಕ್‌ನ ಸಾಲ ಸಂಸ್ಕೃತಿಯ ಮೇಲೆ ಪರಿಣಾಮ: ಆರ್‌ಬಿಐ ಗವರ್ನರ್

Update: 2019-01-07 21:52 IST

ಹೊಸದಿಲ್ಲಿ,ಜ.7: ಕೃಷಿ ಸಾಲಮನ್ನಾವನ್ನು ಸಾಮಾನ್ಯಗೊಳಿಸುವುದು ಬ್ಯಾಂಕ್‌ ನ ಸಾಲ ನೀಡುವಿಕೆ ಮತ್ತು ಸಾಲಗಾರರ ವರ್ತನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ತಿಳಿಸಿದ್ದಾರೆ.

ರಾಜ್ಯಗಳಲ್ಲಿ ಆಡಳಿತಕ್ಕೆ ಬಂದಿರುವ ಹೊಸ ಸರಕಾರಗಳು ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಲು ಕೃಷಿ ಸಾಲ ಮನ್ನಾ ಮಾಡುತ್ತಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ದಾಸ್, ಚುನಾಯಿತ ಸರಕಾರಗಳಿಗೆ ತಮ್ಮ ಆರ್ಥಿಕತೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಸಾಂವಿಧಾನಿಕ ಹಕ್ಕಿದೆ. ಆದರೆ ಯಾವುದೇ ರಾಜ್ಯ ಸರಕಾರ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ತನ್ನ ಆರ್ಥಿಕ ಕ್ಷಮತೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ತಿಳಿಸಿದ್ದಾರೆ. ತನ್ನ ಬಳಿ ಅಗತ್ಯತೆಯನ್ನು ಈಡೇರಿಸುವಷ್ಟು ಮತ್ತು ಕೂಡಲೇ ಬ್ಯಾಂಕ್‌ಗಳಿಗೆ ಹಣವನ್ನು ಬಿಡುಗಡೆ ಮಾಡುವಷ್ಟು ಆರ್ಥಿಕ ಕ್ಷಮತೆಯಿದೆಯೇ ಎನ್ನುವುದನ್ನು ಸರಕಾರಗಳು ಪರಿಶೀಲಿಸಬೇಕು. ಅದಲ್ಲದೆ ಕೃಷಿ ಸಾಲಮನ್ನಾವನ್ನು ಸಾಮಾನ್ಯಗೊಳಿಸುವುದರಿಂದ ಸಾಲ ಸಂಸ್ಕೃತಿ ಮತ್ತು ಭವಿಷ್ಯದಲ್ಲಿ ಸಾಲಗಾರರ ವರ್ತನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎಂದು ದಾಸ್ ತಿಳಿಸಿದ್ದಾರೆ.

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಒಟ್ಟಾರೆ 1.47 ಲಕ್ಷ ರೂ. ಕೃಷಿ ಸಾಲ ಬಾಕಿಯಿದ್ದು ಅದನ್ನು ಮನ್ನಾ ಮಾಡುವುದಾಗಿ ಆಯಾ ರಾಜ್ಯಗಳ ಸರಕಾರಗಳು ಘೋಷಿಸಿವೆ. 2017ರಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಪಂಜಾಬ್ ಸರಕಾರ ಮರುಪಾವtiಯಾಗದ ಸಾಲಗಳನ್ನು ಮನ್ನಾ ಮಾಡಿದ್ದರೆ ಕಳೆದ ವರ್ಷ ಕೊನೆಯಲ್ಲಿ ಕರ್ನಾಟಕದ ಮೈತ್ರಿ ಸರಕಾರ ಕೃಷಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News