15 ದಿನಗಳ ಬಳಿಕ ಸಮುದ್ರಕ್ಕೆ ಇಳಿದ ಮಲ್ಪೆ ಬೋಟುಗಳು: ಮೀನುಗಾರರಿಂದಲೇ ನಾಪತ್ತೆಯಾಗಿರುವ ಬೋಟಿಗಾಗಿ ಶೋಧ
ಉಡುಪಿ, ಡಿ.7: ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆ ಯಾಗಿರುವ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಮೀನುಗಾರಿಕೆ ಸ್ಥಗಿತಗೊಳಿಸಿ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಆಳಸಮುದ್ರ ಮೀನುಗಾರಿಕಾ ಬೋಟುಗಳ ಪೈಕಿ ಕೆಲವು ಬೋಟುಗಳು ಇಂದು ರಾತ್ರಿಯಿಂದ ಸಮುದ್ರಕ್ಕೆ ಇಳಿದಿದ್ದು, ನಾಪತ್ತೆಯಾಗಿರುವ ಬೋಟು ಹಾಗೂ ಮೀನುಗಾರರನ್ನು ಹುಡುಕುವ ಕೆಲಸ ಮಾಡಲಿವೆ.
ಡಿ.15ರಿಂದ ಏಳು ಮಂದಿ ಮೀನುಗಾರರ ಸಹಿತ ಸುವರ್ಣ ತ್ರಿಭುಜ ಬೋಟು ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿರುವ ಹಿನ್ನೆಲೆಯಲ್ಲಿ ಡಿ.23ರಿಂದ ಮಲ್ಪೆಗೆ ಆಗಮಿಸಿದ್ದ ಬೋಟುಗಳು ಮರಳಿ ಮೀನುಗಾರಿಕೆಗೆ ತೆರಳದೆ ಬಂದರಿ ನಲ್ಲೇ ಲಂಗರು ಹಾಕಿದ್ದವು. ಹೀಗೆ ಸುಮಾರು 1100 ಆಳಸಮುದ್ರ ಮೀನುಗಾರಿಕಾ ಬೋಟುಗಳು ಹಾಗೂ 400 ಪರ್ಸಿನ್ ಬೋಟುಗಳು ಕಳೆದ 15 ದಿನಗಳಿಂದ ಮಲ್ಪೆ ಬಂದರಿನಲ್ಲೇ ಉಳಿದುಕೊಂಡಿದ್ದವು.
ಜ.6ರ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟದ ಬಳಿಕ ಸಂಜೆ ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜ.7ರಿಂದ ಬೋಟುಗಳು ಆಳಸಮುದ್ರ ಮೀನುಗಾರಿಕೆಗೆ ತೆರಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಇಂದು ರಾತ್ರಿಯಿಂದ ಡಿಸೇಲ್, ಮಂಜುಗಡ್ಡೆ ತುಂಬಿಸಿ ಸಜ್ಜಾಗಿರುವ ಸುಮಾರು 300-400 ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಮೀನುಗಾರಿಕೆಗೆ ಹೊರಟಿವೆ ಎಂದು ತಿಳಿದು ಬಂದಿದೆ.
ಈ ಎಲ್ಲ ಬೋಟುಗಳು ಸುವರ್ಣ ತ್ರಿಭುಜ ಬೋಟು ನಾಪತ್ತೆಯಾಗಿರುವ ಮಹಾರಾಷ್ಟ್ರ ರಾಜ್ಯದ ನಿಗದಿತ ಸ್ಥಳದ ಕಡೆಗೆ ಹೊರಡಲಿದ್ದು, ಮೊದಲ ಎರಡು ದಿನಗಳ ಕಾಲ ನಾಪತ್ತೆಯಾಗಿರುವ ಬೋಟು ಹಾಗೂ ಮೀನುಗಾರರಿಗಾಗಿ ಹುಡುಕಾಟ ನಡೆಸಲಿವೆ. ನಂತರ ಅಲ್ಲಿಂದ ಈ ಬೋಟುಗಳು ಮೀನುಗಾರಿಕೆ ಯನ್ನು ಮುಂದುವರಿಸಲಿದೆ. ಅದೇ ರೀತಿ ಪ್ರತಿದಿನ ಹೊರಡುವ 300-400 ರಷ್ಟು ಬೋಟುಗಳು ನಾಪತ್ತೆಯಾಗಿರುವ ಬೋಟನ್ನು ಹುಡುಕುವ ಕೆಲಸ ಮಾಡ ಲಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿ ದ್ದಾರೆ.
ಈ ಬೋಟಿನವರಿಗೆ ನಾಪತ್ತೆಯಾಗಿರುವ ಬೋಟು ಹಾಗೂ ಮೀನುಗಾರರ ಬಗ್ಗೆ ಯಾವುದೇ ಸುಳಿವು ಸಿಕ್ಕಿದರೆ ವಯರ್‌ಲೆಸ್ ಮೂಲಕ ನಮಗೆ ಮಾಹಿತಿ ರವಾನಿಸಲಿದ್ದಾರೆ. ಹೀಗೆ ನಾಪತ್ತೆಯಾದ ನಮ್ಮವರಿಗಾಗಿ ನಿರಂತರ ಹುಡುಕುವ ಕೆಲಸ ಮಾಡಲಾಗುವುದು. ಹುಡುಕಾಟ ನಡೆಸುವ ಬೋಟುಗಳು ಸಮುದ್ರ ದಲ್ಲಿ ಸೂಕ್ತ ವಾತಾವರಣ ಇದ್ದರೆ ಮಾತ್ರ ಮೀನುಗಾರಿಕೆಯನ್ನು ನಡೆಸಲಿವೆ ಎಂದು ಅವರು ಹೇಳಿದರು.
25 ಮಂದಿಯ ಪ್ರತ್ಯೇಕ ಸಮಿತಿ ರಚನೆ
ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯೊಂದಿಗೆ ಸಂಪರ್ಕ ಸಾಧಿಸುವುದಕ್ಕಾಗಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ನೇತೃತ್ವದಲ್ಲಿ 25 ಮಂದಿಯ ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯಲ್ಲಿ ತಾಂಡೇಲರ ಸಂಘ, ಆಳಸಮುದ್ರ ಮೀನುಗಾರರ ಸಂಘ, ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಮೀನು ಗಾರ ಮುಖಂಡರುಗಳನ್ನು ಸೇರಿಸಿಕೊಳ್ಳಲಾಗಿದೆ. ಈ ಕಮಿಟಿಯು ನಾಪತ್ತೆ ಯಾಗಿರುವ ಬೋಟು ಹಾಗೂ ಮೀನುಗಾರರ ಪತ್ತೆಗಾಗಿ ಸರಕಾರ ಹಾಗೂ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲಿದೆ. ಅಲ್ಲದೆ ಈ ಕುರಿತು ಮಾಹಿತಿ ಹಂಚಿಕೊಳ್ಳುವುದು ಮಾತ್ರವಲ್ಲದೆ ಈ ಸಂಬಂಧ ಪ್ರತಿಯೊಂದು ನಿರ್ಧಾರವನ್ನು ಈ ಸಮಿತಿ ತೆಗೆದುಕೊಳ್ಳಲಿದೆ ಎಂದು ಸತೀಶ್ ಕುಂದರ್ ತಿಳಿಸಿದ್ದಾರೆ.
ಮೀನುಗಾರರಿಂದ ಪ್ರಧಾನಿ ಭೇಟಿ
ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಸೇರಿದಂತೆ ಒಟ್ಟು ಐದು ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮೀನುಗಾರರ ಸಂಘದ ನೇತೃತ್ವದ ನಿಯೋಗ ಜ.8ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ.
ಡಿಸೇಲ್ ತೆರಿಗೆ ವಿನಾಯಿತಿ, ನಾಪತ್ತೆಯಾದ ಮೀನುಗಾರರ ಪತ್ತೆಗಾಗಿ ಆಧುನಿಕ ತಂತ್ರಜ್ಞಾನ ಬಳಕೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ಜಿಎಸ್‌ಟಿ ಮುಕ್ತ ಮೀನುಗಾರಿಕೆ, ರಿಯಾಯಿತಿ ದರದಲ್ಲಿ ನಾಡದೋಣಿಗೆ ಸೀಮೆಎಣ್ಣೆ ವಿತರಣೆ ಎಂಬ ಐದು ಬೇಡಿಕೆಗಳನ್ನು ನಿಯೋಗವು ಪ್ರಧಾನಿಗೆ ಸಲ್ಲಿಸಲಿದೆ.
ಈ ನಿಯೋಗದಲ್ಲಿ ಮಲ್ಪೆ ಮೀನುಗಾರ ಮುಖಂಡರಾದ ಸತೀಶ್ ಕುಂದರ್, ಯಶ್ಪಾಲ್ ಸುವರ್ಣ, ದಯಾನಂದ ಸುವರ್ಣ, ರಮೇಶ್ ಸುವರ್ಣ, ಕರುಣಾಕರ ಸಾಲ್ಯಾನ್, ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಕರಾವಳಿ ಜಿಲ್ಲೆಗಳ ಸಂಸದರು ಭಾಗವಹಿಸಲಿದ್ದಾರೆ.