ಕುಂದಾಪುರ: ಕಲಾಕ್ಷೇತ್ರದಿಂದ ಸಂಗೀತ ಕಾರ್ಯಕ್ರಮ ‘ಇನಿದನಿ’
ಉಡುಪಿ, ಜ.7: ಕುಂದಾಪುರದ ಸಾಂಸ್ಕೃತಿಕ ಸಂಘಟನೆ ಕಲಾಕ್ಷೇತ್ರದಿಂದ 9ನೇ ವರ್ಷದ ಸುಮಧುರ ಕನ್ನಡ ಚಿತ್ರಗೀತೆಗಳ ಸಂಗೀತ ಸಂಜೆ ‘ಇನಿದನಿ’ ಇದೇ ಜ.13ರ ರವಿವಾರ ಸಂಜೆ 6 ರಿಂದ ಕುಂದಾಪುರ ಬೋರ್ಡ್ ಹೈಸ್ಕೂಲ್‌ನ ಬಯಲು ರಂಗಮಂಟಪದಲ್ಲಿ ನಡೆಯಲಿದೆ ಎಂದು ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಾಪುರದ ಜನತೆಗೆ ಹಳೆಯದಾದ ಮಾಧುರ್ಯಪೂರ್ಣವಾದ 70-80ರ ದಶಕದ ಕನ್ನಡ ಚಲನಚಿತ್ರ ಹಾಡುಗಳನ್ನು ಆಸ್ವಾದಿಸುವ ಅವಕಾಶವನ್ನು ತಮ್ಮ ಸಂಸ್ಥೆ ಮಾಡುತಿದ್ದು, ಅದೀಗ ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಜನಪ್ರಿಯಗೊಳ್ಳು ತ್ತಿದೆ ಎಂದರು.
ಈ ನಿಟ್ಟಿನಲ್ಲಿ ಈ ಬಾರಿ ಜ.13ರಂದು ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದರಲ್ಲಿ 30 ಆಯ್ದ ಇಂಪಾದ ಹಾಡುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ ಎಂದರು.ಖ್ಯಾತ ಗಾಯಕ ಅಜೇಯ್ ವಾರಿಯರ್, ಗಾಯಕಿ ಬೆಂಗಳೂರಿನ ಶೃತಿ ಭಿಡೆ, ದಿವ್ಯ ರಾಮಚಂದ್ರ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಮಂಗಳೂರಿನ ರಾಜ್‌ಗೋಪಾಲ್, ಶಿವಮೊಗ್ಗದ ದೀಪಕ್, ಕೇರಳದ ಸಿಜಿ ಮೋಹನ್ ಮತ್ತು ಜಯಪ್ರಕಾಶ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಿಶೋರ್ ಕುಮಾರ್ ತಿಳಿಸಿದರು.
ಆಸಕ್ತರಿಗೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹಳೆ ಚಿತ್ರಗೀತೆಗಳ ಪ್ರೇಮಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಕಲಾಕ್ಷೇತ್ರದ ಉಪಾಧ್ಯಕ್ಷರಾದ ಕೆ.ಆರ್. ನಾಯಕ್, ಪ್ರವೀಣ್‌ಕುಮಾರ್ ಹಾಗೂ ರಾಜೇಶ್ ಕಾವೇರಿ ಉಪಸ್ಥಿತರಿದ್ದರು.