ಶಬರಿಮಲೆ ಹಿಂಸಾಚಾರ: 1800 ಪ್ರಕರಣ ದಾಖಲು, 5,700 ಬಂಧನ

Update: 2019-01-07 17:11 GMT

ತಿರುವನಂತಪುರ, ಜ. 7: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಋತುಮಾನ ವಯಸ್ಸಿನ ಇಬ್ಬರು ಮಹಿಳೆಯರು ಪ್ರವೇಶಿಸಿದ ಬಳಿಕ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ 1,869 ಪ್ರಕರಣಗಳನ್ನು ದಾಖಲಿಸ ಲಾಗಿದೆ ಹಾಗೂ 5,769 ಜನರನ್ನು ಬಂಧಿಸಲಾಗಿದೆ.

 ಶಬರಿಮಲೆ ದೇವಾಲಯಕ್ಕೆ ಋತುಚಕ್ರದ ಮಹಿಳೆಯರಿಗೆ ಪ್ರವೇಶ ಅವಕಾಶ ನೀಡಿ ಸೆಪ್ಟಂಬರ್ 23ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಶಬರಿಮಲೆ ಹಿಂಸಾಚಾರಕ್ಕೆ ಸಂಬಂಧಿಸಿ ಸಾಂವಿಧಾನಿಕ ಪರಿಣಾಮಗಳನ್ನು ಎದುರಿಸಬೇಕಾದೀತು ಎಂಬ ಅವರ ಬೆದರಿಕೆಗೆ ತಾನು ತಲೆಬಾಗಲಾರೆ ಎಂದಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ನಿಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆ ನೀಡುವಂತೆ ವಿಜಯನ್ ಬಿಜೆಪಿಯ ರಾಷ್ಟ್ರೀಯ ವರಿಷ್ಠರಲ್ಲಿ ಕೋರಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸುವ ಸಾಂವಿಧಾನಿಕ ಕರ್ತವ್ಯ ರಾಜ್ಯಕ್ಕಿದೆ. ಆರೆಸ್ಸೆಸ್, ಬಿಜೆಪಿ ಹಾಗೂ ಸಂಘಪರಿವಾರ ಸೃಷ್ಟಿಸಿದ ಹಿಂಸಾಚಾರ ಹೊರತು ಬೇರೆ ಯಾವುದೇ ಸಮಸ್ಯೆ ಇಲ್ಲಿಲ್ಲ. ಈಗ ಅವರು ರಾಜ್ಯಕ್ಕೆ ಸಾಂವಿಧಾನಿಕ ಪರಿಣಾಮ ಎದುರಿಸಬೇಕಾದೀತು ಎಂಬ ಬೆದರಿಕೆ ಒಡ್ಡಿದ್ದಾರೆ ಎಂದು ವಿಜಯನ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯದ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ಕಾರ್ಯಕರ್ತರನ್ನು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರಕಾರ ಬಂಧಿಸುತ್ತಿದೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಆರೋಪಿಸಿದ ಬಳಿಕ ಮುಖ್ಯಮಂತ್ರಿ ಅವರು ಈ ಹೇಳಿಕೆ ಪೋಸ್ಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News