ಉರಿಯೂತ ನಿರೋಧಕ ಔಷಧಿ 'ಏಸ್ ಪ್ರಾಕ್ಸಿವಾನ್' ಮೇಲಿನ ನಿಷೇಧವನ್ನು ತಳ್ಳಿಹಾಕಿದ ಹೈಕೋರ್ಟ್

Update: 2019-01-07 17:11 GMT

ಹೊಸದಿಲ್ಲಿ,ಜ.7: ಯಾತನಾದಾಯಕ ರುಮಾಟಾಯ್ಡ ಸಂಧಿವಾತದ ಚಿಕಿತ್ಸೆಯಲ್ಲಿ ಬಳಸಲಾಗುವ ಉರಿಯೂತ ನಿರೋಧಕ ಔಷಧಿ 'ಏಸ್ ಪ್ರಾಕ್ಸಿವಾನ್'ನ ಮೇಲೆ ಕೇಂದ್ರವು ಹೇರಿದ್ದ ನಿಷೇಧವನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಸೋಮವಾರ ತಳ್ಳಿಹಾಕಿದೆ. ಖ್ಯಾತ ಭಾರತೀಯ ಔಷಧಿ ತಯಾರಿಕೆ ಸಂಸ್ಥೆೆ ವೋಖಾರ್ಟ್ ಈ ಔಷಧಿಯನ್ನು ತಯಾರಿಸುತ್ತಿದೆ.

328 ಫಿಕ್ಸ್ಡ್ ಡೋಸ್ ಕಾಂಬಿನೇಷನ್(ಎಫ್‌ಡಿಸಿ) ಅಥವಾ ಒಂದಕ್ಕಿಂತ ಹೆಚ್ಚಿನ ಸಂಯೋಜನೆಯ ಔಷಧಿಗಳ ತಯಾರಿಕೆ,ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿ ಕೇಂದ್ರ ಸರಕಾರವು 2018,ಸೆ.7ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ವೋಕಾರ್ಟ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ.ವಿಭು ಭಾಖ್ರು ಅವರು ಈ ಆದೇಶವನ್ನು ಹೊರಡಿಸಿದರು.

ಇದು ನ್ಯಾಯಾಲಯವು ಇತ್ಯರ್ಥಗೊಳಿಸಿರುವ ಅಧಿಸೂಚನೆಯ ವಿರುದ್ಧದ ಮೊದಲ ಅರ್ಜಿಯಾಗಿದೆ. ಇನ್ನೂ ಹಲವಾರು ಅರ್ಜಿಗಳು ವಿಚಾರಣೆಗೆ ಬಾಕಿಯಿವೆ.

ತಮ್ಮ ಎಫ್‌ಡಿಸಿಗಳನ್ನು ನಿಷೇಧಿಸಿರುವುದರ ವಿರುದ್ಧ ಗ್ಲೆನ್‌ಮಾರ್ಕ್,ಆಲ್ಕೆಂ ಲ್ಯಾಬರೇಟರೀಸ್,ಅಬ್ಸರ್ಜ್ ಬಯೊಟೆಕ್,ಕೋರಲ್ ಲ್ಯಾಬರೇಟರೀಸ್ ಸೇರಿದಂತೆ ಹಲವಾರು ಪ್ರಮುಖ ಔಷಧಿ ತಯಾರಿಕೆ ಸಂಸ್ಥೆಗಳು ಉಚ್ಚ ನ್ಯಾಯಾಲಯದ ಮೆಟ್ಟಿಲುಗಳನ್ನೇರಿವೆ.

ವೋಖಾರ್ಟ್‌ನ ಏಸ್ ಪ್ರಾಕ್ಸಿವಾನ್ ಮಾತ್ರೆಯ ರೂಪದಲ್ಲಿದ್ದು,ಎಸಿಕ್ಲೋಫೆನಕ್,ಪ್ಯಾರಾಸಿಟಾಮಲ್ ಮತ್ತು ರಾಬಿಪ್ರರೆಲ್ ಸಂಯೋಜನೆಯನ್ನು ಹೊಂದಿದ್ದು,ಈ ಸಂಯೋಜನೆ ನಿಷೇಧ ಪಟ್ಟಿಯಲ್ಲಿದೆ.

ಸೆಪ್ಟೆಂಬರ್‌ನಲ್ಲಿ ವೋಖಾರ್ಟ್ ಸಲ್ಲಸಿದ್ದ ಅಜಿಗೆ ಸಂಬಂಧಿಸಿದಂತೆ ತನ್ನ ಆದೇಶವನ್ನು ಉಚ್ಚ ನ್ಯಾಯಾಲಯವು ಕಳೆದ ವರ್ಷದ ನ.15ರಂದು ಕಾಯ್ದಿರಿಸಿತ್ತು.

ವೋಖಾರ್ಟ್ ಔಷಧಿಯ ಉತ್ಪಾದನೆಯನ್ನು ನಿಲ್ಲಿಸುವುದಕ್ಕೆ ಒಳಪಟ್ಟಂತೆ ಈಗಾಗಲೇ ಮಾರುಕಟ್ಟೆಯಲ್ಲಿ ದಾಸ್ತಾನಿರುವ ಏಸ್ ಪ್ರಾಕ್ಸಿವಾನ್ ಮಾತ್ರೆಗಳ ಮಾರಾಟ ಮಾಡುವುದರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳದಂತೆ ನ್ಯಾಯಾಲಯವು ಈ ಮೊದಲು ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News