ಬಸ್ಸಿಗೆ ಕಲ್ಲೆಸೆದ ಪ್ರಕರಣ: ಕ್ರೀಡಾ ಸಚಿವರಿಗೆ 3 ವರ್ಷ ಜೈಲು

Update: 2019-01-07 17:21 GMT

ಚೆನ್ನೈ, ಜ. 7: ನಲ್ವತ್ತಾರು ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತದ ಬಳಿಕ ಬಸ್ಸಿಗೆ ಕಲ್ಲೆಸೆದ ಎರಡು ದಶಕಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ತಮಿಳುನಾಡು ಕ್ರೀಡೆ ಹಾಗೂ ಯುವಜನ ಕಲ್ಯಾಣ ಖಾತೆ ಸಚಿವ ಪಿ. ಬಾಲಕೃಷ್ಣ ರೆಡ್ಡಿಗೆ ದೋಷಿ ಎಂದು ಪರಿಗಣಿಸಿದೆ ಹಾಗೂ 3 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇದುವರೆಗೆ ಬಾಕಿ ಇದ್ದ ಪ್ರಕರಣಗಳ ತೀರ್ಪು ಘೋಷಿಸಿರುವ ವಿಶೇಷ ನ್ಯಾಯಮೂರ್ತಿ ಜೆ. ಶಾಂತಿ, ಕಿಷನ್‌ಗಿರಿ ಜಿಲ್ಲೆಯ ಎಐಎಡಿಎಂಕೆಯ ಪ್ರಭಾವಿ ನಾಯಕ ರೆಡ್ಡಿಗೆ 10 ಸಾವಿರ ರೂ. ದಂಡವನ್ನೂ ವಿಧಿಸಿದೆ. ಆದಾಗ್ಯೂ ಸಚಿವರ ಮನವಿ ಹಿನ್ನೆಲೆಯಲ್ಲಿ ಚೆನ್ನೈ ಉಚ್ಚ ನ್ಯಾಯಾಲಯದಲ್ಲಿ ಅಫೀಲು ಸಲ್ಲಿಸಲು ಸಾಧ್ಯವಾಗುವಂತೆ ಶಿಕ್ಷೆಯನ್ನು ಅಮಾನತುಗೊಳಿಸಿದ್ದಾರೆ.

ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಲಿದ್ದೇನೆ ಹಾಗೂ ಆರೋಪ ಮುಕ್ತನಾಗಿ ಹೊರಬರಲಿದ್ದೇನೆ ಎಂದು ಅವರು ನ್ಯಾಯಾಲಯದ ಹೊರಗೆ ಮಾಧ್ಯಮದವರಲ್ಲಿ ಹೇಳಿದರು. 1998 ಆಗಸ್ಟ್‌ನಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 11 ಮಹಿಳೆಯರ ಸಹಿತ 46 ಮಂದಿ ಮೃತಪಟ್ಟಿದ್ದರು. ಸೋಲಾಗಿರಿ, ಸಮಪಲ್ಲಂ ಹಾಗೂ ಮೇಲ್ಮಾಲೈ ಗ್ರಾಮದ ಇತರ 282 ಜನರು ತೀವ್ರ ಅಸ್ವಸ್ಥರಾಗಿದ್ದರು. ಆಗಿನ ಎಐಎಡಿಎಂಕೆ ನಾಯಕರಾಗಿದ್ದ ರೆಡ್ಡಿ ಆಡಳಿತಾರೂಢ ಡಿಎಂಕೆ ಸರಕಾರದ ವಿರುದ್ಧ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪಾಲ್ಗಾರ್‌ನಲ್ಲಿ ಅವರು ರಾಜ್ಯ ಸರಕಾರಕ್ಕೆ ಸೇರಿದ್ದ ಬಸ್ಸೊಂದಕ್ಕೆ ಕಲ್ಲೆಸೆದಿದ್ದರು.

ಬಾಕ್ಸ್

ಸಚಿವ ಪಿ. ಬಾಲಕೃಷ್ಣ ರೆಡ್ಡಿ ತನ್ನ ರಾಜೀನಾಮೆ ಪತ್ರವನ್ನು ಸೋಮವಾರ ಮುಖ್ಯಮಂತ್ರಿ ಎಡಪಳ್ಳಿ ಕೆ. ಪಳನಿಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ. ‘‘ರೆಡ್ಡಿ ಅವರು ಮುಖ್ಯಮಂತ್ರಿಗೆ ಸಲ್ಲಿಸಿದ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ರವಾನಿಸಲಾಗಿದೆ’’ ಎಂದು ಸರಕಾರದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News