ಪಾದೆಬೆಟ್ವುವಿನಲ್ಲಿ ಮಂಜೂರಾದ ನಿವೇಶನ: ಶಾಸಕರಿಂದ ಶಿಲಾನ್ಯಾಸ

Update: 2019-01-07 17:29 GMT

ಪಡುಬಿದ್ರೆ, ಜ. 7: 5 ವರ್ಷಗಳ ನಿರಂತರ ಹೋರಾಟದ ಫಲವಾಗಿ ಪಡುಬಿದ್ರಿ ಸುಜ್ಲಾನ್ ಪುನರ್ವಸತಿ ಕಾಲನಿ ಸಮೀಪ ಅತಂತ್ರ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ 19 ಕೊರಗ ಕುಟುಂಬಗಳಿಗೆ ಪಾದೆಬೆಟ್ಟು ಗ್ರಾಮದಲ್ಲಿ  ಮನೆ ನಿರ್ಮಾಣಕ್ಕೆ ಜಮೀನು ಮಂಜೂರಾಗಿದೆ.

ಸೋಮವಾರ ಶಾಸಕ ಶಾಸಕ ಲಾಲಾಜಿ ಆರ್ ಮೆಂಡನ್ ಸೋಮವಾರ ಶಂಕುಸ್ಥಾಪನೆ ನೆರವೇರಿಸಿದರು. ಪಡುಬಿದ್ರಿಯ ಪಾದೆಬೆಟ್ಟಿನಲ್ಲಿ ತಲಾ 5 ಸೆಂಟ್ಸ್ ನಂತೆ 19 ಕೊರಗ ಕುಟುಂಬಗಳಿಗೆ ಜಮೀನು ಮಂಜೂರಾಗಿದ್ದು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ತಲಾ ರೂ 2.20ಲಕ್ಷ ವೆಚ್ಚದ ಮನೆ ನಿರ್ಮಾಣಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಐಟಿಡಿಪಿ, ನಿರ್ಮಿತಿ ಕೇಂದ್ರ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಚಾಲನೆ ನೀಡಲಾಯಿತು. ಮುಂದಿನ ಮಳೆಗಾಲ ಆರಂಭಕ್ಕೂ ಮುನ್ನ ಈ ಕಾಮಗಾರಿ ಪೂರ್ಣಗೊಳ್ಳಲಿದೆ. 

5 ವರ್ಷಗಳ ಹಿಂದೆ ಸುಜ್ಲಾನ್ ಯೋಜನಾ ಪ್ರದೇಶದ ಜಮೀನಿನಲ್ಲಿ ಗುಡಿಸಲುಗಳನ್ನು ನಿರ್ಮಿಸಿ ಪುಟ್ಟ ಮಕ್ಕಳೊಂದಿಗೆ 19 ಕೊರಗ ಕುಟುಂಬ ಜೀವನ ಸಾಗಿಸುತಿತ್ತು. ಅಲ್ಲಿಂದ ಒಕ್ಕಲೆಬ್ಬಿಸಲು ಸುಜ್ಲಾನ್ ಯೋಜನೆ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯದ ತೀರ್ಪು ಸುಜ್ಲಾನ್ ಪರವಾಗಿ ಬಂದಿದ್ದು, ಕಂಪೆನಿಯು ಈ ಕುಟುಂಬಗಳನ್ನು ಜೂನ್ ತಿಂಗಳಿನಲ್ಲಿ ತೆರವು ಮಾಡಲು ಗಡುವು ವಿಧಿಸಿತ್ತು. ಆ ಬಳಿಕ ಸಮೀಪದ ಸುಜ್ಲಾನ್ ಪುನರ್ವಸತಿ ಕಾಲೋನಿ ಬಳಿ 50 ಸೆಂಟ್ಸ್ ಜಮೀನು ಗುರುತಿಸಿ ವಿಂಗಡಿಸಿ ನೀಡಲಾಗಿತ್ತು. ಆದರೆ ಅಲ್ಲಿ  ವಸತಿ ನಿರ್ಮಾಣ ಮಾಡದಂತೆ ಪುನರ್ವಸತಿ ಕಾಲೊನಿ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿ ನವೆಂಬರ್ 2016 ರಲ್ಲಿ ಕೊರಗರಿಗೆ ನ್ಯಾಯ ದೊರಕಿತ್ತು. ಆದರೆ ಅಲ್ಲಿ ನಿವೇಶನ ಲಭ್ಯವಾದರೂ ಸುಜ್ಲಾನ್ ಪುನರ್ವಸತಿ ಕಾಲನಿ ಕೆಲ ನಿವಾಸಿಗರ ದೌರ್ಜನ್ಯದಿಂದ ಮನೆ ನಿರ್ಮಾಣ ಮಾಡುವುದು ಕಷ್ಟವಾಗಿತ್ತು. ಈ ವೇಳೆ ಕೊರಗ ಕುಟುಂಬವು ಜನವರಿ ತಿಂಗಳಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಯವರಲ್ಲಿ ಕೊರಗರು ಅಳಲು ತೋಡಿಕೊಂಡಿದ್ದರು. ಹಾಗೂ ಬೇರೆಡೆ ಜಮೀನು ನೀಡುವಂತೆ ಮನವಿ ಮಾಡಿದ್ದರು. ಇದೀಗ ಅವರ ಬೇಡಿಕೆಗೆ ಸ್ಪಂದನೆ ದೊರಕಿದೆ.

ಪರಿಶಿಷ್ಟ ಪಂಗಡದ ಪ್ರದೇಶಾಭಿವೃದ್ಧಿ ನಿಧಿಯಿಂದ 9ಲಕ್ಷ ರೂ. ವೆಚ್ಚದ ಪಾದೆಬೆಟ್ಟು ಕೊರಗರ ಕಾಲೊನಿ ರಸ್ತೆ ಕಾಂಕ್ರೀಟಿಕರಣ, ಶಾಸಕರ ನಿಧಿಯಿಂದ ಪಾದೆಬೆಟ್ಟು ಪಟ್ಲ ಬಳಿ ಐದು ಲಕ್ಷ ರೂ. ವೆಚ್ಚದ ಕಾಲುಸಂಕ ನಿರ್ಮಾಣಕ್ಕೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಡಾ.ಬಿ.ಆರ್ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಾಯಿತ ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರು ಹಾಗೂ ಅವರ ಅವಲಂಭಿತರಿಗಾಗಿ ನಿರ್ಮಿತಿ ಕೇಂದ್ರದ ಮೂಲಕ ಪಾದೆಬೆಟ್ಟು ಶಾಲೆಯಲ್ಲಿ ಒಂದು ತಿಂಗಳ ಕಾಲ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ 58 ಶಿಬಿರಾರ್ಥಿಗಳಿಗೆ ಸಲಕರಣೆ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ  ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಕೋಟ್ಯಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅಮೀನ್, ಸದಸ್ಯರಾದ ಜಗದೀಶ ಶೆಟ್ಟಿ, ರವಿ ಶೆಟ್ಟಿ, ಲತಾ, ಚುಮ್ಮಿ, ಶ್ರೀನಿವಾಸ ಶರ್ಮ, ಪಿಡಿಒ ಪಂಚಾಕ್ಷರಿ ಸ್ವಾಮಿ ಕೇರಿಮಠ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್‍ಕುಮಾರ್, ಐಟಿಡಿಪಿ ಯೋಜನಾ ಸಮಯನ್ವಾಧಿಕಾರಿ ಲಲಿತಾದೇವಿ, ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ, ಅಲ್ಟ್ರಾಟೆಕ್ ಸಿಮೆಂಟ್‍ನ ನಾಗೇಶ್, ಮುಖಂಡರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮಾಕಾಂತ ದೇವಾಡಿಗ, ಮಿಥುನ್ ಆರ್ ಹೆಗ್ಡೆ, ಬಾಲಕೃಷ್ಣ ದೇವಾಡಿಗ, ಗಣೇಶ್ ಬಾರ್ಕೂರು, ಶ್ರೀಮತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News