ಬೀರಿ: ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಸಭೆ
ಉಳ್ಳಾಲ, ಜ. 7: ಶಬರಿಮಲೆಗೆ ಮಹಿಳೆಯರ ಪ್ರವೇಶ, ಶ್ರೀ ರಾಮಚಂದ್ರನ ಮತ್ತು ಪ್ರವಾದಿ (ಸ) ವಿರುದ್ಧ ಹೇಳಿಕೆಯನ್ನು ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಸಭೆ ಸೋಮವಾರ ಬೀರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು, ಯಾರೇ ಆಗಲಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುಂತಹ ಪ್ರಯತ್ನ ಮಾಡಬಾರದು. ಧರ್ಮದ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸುವ ಕೆಲಸ ಸರಿಯಲ್ಲ ಎಂದರು.
ಮಮತಾಗಟಿ ಮಾತನಾಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆದಾಗ ಕಾಂಗ್ರೆಸ್ ಧರ್ಮ ನೋಡದೇ ಮಾತನಾಡುತ್ತದೆ. ಶಬರಿಮಲೆ ವಿಚಾರದಲ್ಲಿ 800 ವರ್ಷದಿಂದ ಪಾಲಿಸಿಕೊಂಡು ಬಂದ ಆಚಾರಗಳನ್ನು ಮಹಿಳೆಯರು ಪ್ರವೇಶ ಮಾಡುವ ಮೂಲಕ ಅಪಚಾರ ಮಾಡಿದ್ದಾರೆ. ಇದು ಸರಿಯಲ್ಲ. ಆದರೂ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಇದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಂದು ಧರ್ಮಕ್ಕೂ ಕಟ್ಟುಪಾಡು ಗಳಿವೆ. ಕೇರಳದಲ್ಲಿ ಅಧಿಕಾರದಲ್ಲಿರುವ ಸಿಪಿಐಎಂ ಮುಖಂಡರು ದೇವರ ಮೇಲೆ ನಂಬಿಕೆ ಇಡುವುದಿಲ್ಲ. ನಂಬಿಕೆ ದೇವರ ಮೇಲೆ ಇದೆ ಎನ್ನುವ ಬಿಜೆಪಿ ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದರು.
ಸಭೆಯಲ್ಲಿ ಭಾಗವಹಿಸಿದ ಬಂಟ್ವಾಳ ತಾ.ಪಂ. ಮಾಜಿ ಉಪಾಧ್ಯಕ್ಷ ಉಮ್ಮರ್ ಪಜೀರ್ ಮಾತನಾಡಿದರು. ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ತಾ.ಪಂ. ಸದಸ್ಯ ಮುಸ್ತಫ ಮಲಾರ್, ದಿನೇಶ್ ಕುಂಪಲ, ದಿನೇಶ್ ರೈ, ಆಲ್ವಿನ್‍ಡಿಸೋಜ ಉಪಸ್ಥಿತರಿದ್ದರು.