ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಮಹಿಳೆಯ ಕುರಿತು ಕಾಳಜಿ ಇದ್ದರೆ ಮೀಸಲಾತಿ ಕೊಡಲಿ: ಫಾತಿಮಾ ಮುಝಾಫರ್
ಭಟ್ಕಳ, ಜ. 7: ಕೇಂದ್ರ ಸರಕಾರವು ಮುಸ್ಲಿಂ ಮಹಿಳೆಯರ ಪರವಾಗಿ ಮದುವೆಯ ಹಕ್ಕನ್ನು ರಕ್ಷಿಸಲು ಮುಂದಾಗಿರುವುದು ಒಂದು ವಿಸ್ಮಯವಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೊರ್ಡನ ಚೆನ್ನೈನ ಸದಸ್ಯೆ ಎ.ಎಸ್.ಫಾತಿಮಾ ಮುಝಾಫರ್ ಹೇಳಿದರು.
ಅವರು ಇಲ್ಲಿನ ಅಂಜುಮಾನ್ ಶಿಕ್ಷಣ ಸಂಸ್ಥೆಯ ಜುಕಾಕೋ ಸ್ಮಾರಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಕೇಂದ್ರ ಸರಕಾರಕ್ಕೆ ನಿಜವಾಗಿಯೂ ಮುಸ್ಲಿಮ್ ಮಹಿಳೆಯ ಕುರಿತು ಕಾಳಜಿ ಇದ್ದರೆ ಅವರಿಗೆ ಮೀಸಲಾತಿ ಕೊಡಲಿ, ಚುನಾವಣೆಯಲ್ಲಿ, ಸರಕಾರಿ ನೌಕರಿಯಲ್ಲಿ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ರೀತಿಯ ಮೀಸಲಾತಿಯನ್ನು ನೀಡುವ ಮೂಲಕ ಅವರು ಕಷ್ಟಕ್ಕೆ ಸ್ಪಂದಿಸಬಹುದು. ಅದನ್ನು ಬಿಟ್ಟು ಮುಸ್ಲಿಂ ಮಹಿಳೆಯರ ಮುದುವೆಯ ಹಕ್ಕು ರಕ್ಷಣೆಯ ನೆಪ ಹೇಳಿ ಶೋಷಣೆ ಮಾಡುತ್ತಿದ್ದಾರೆ. ನಮ್ಮ ಶರೀಯತ್‍ನಲ್ಲಿ ಎಲ್ಲವೂ ಹೇಳಿದೆ. ಮುಸ್ಲಿಂ ಶರೀಯತ್ ಪ್ರಕಾರ ಮುದುವೆ ಒಂದು ಒಪ್ಪಂದ ಮಾತ್ರ. ಇಲ್ಲಿ ಗಂಡು ಹೆಣ್ಣು ಇಬ್ಬರೂ ಸಮಾನರು. ಅವರಿಗೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಲು ಸಾಧ್ಯವಾಗದಿದ್ದರೆ ಒಬ್ಬರಿಗೊಬ್ಬರು ಅತ್ಯಂತ ಉತ್ತಮ ವಾದ ರೀತಿಯಲ್ಲಿ ಬೇರ್ಪಡಲು ಅವಕಾಶ ಮಾಡಿಕೊಟ್ಟಿದೆ. ನಮ್ಮಲ್ಲಿ ಗೃಹ ಹಿಂಸೆ, ವಿಚ್ಚೇದನ, ಕೋರ್ಟ ಮೆಟ್ಟಲೇರುವ ಪ್ರಕರಣಗಳು ಕೇವಲ ಕೆಲವು ಮಾತ್ರ ಎನ್ನುವುದು 2006 ರಿಂದ 2011ರತನಕದ ಅಂಕಿ ಅಂಶಗಳನ್ನು ನೊಡಿದರೆ ತಿಳಿಯುತ್ತದೆ ಎಂದರು.
ಕೇಂದ್ರ ಸರಕಾರ ನಮ್ಮ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಮೇಲೆ ಮೂಗು ತೂರಿಸುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದ ಅವರು ನಮ್ಮ ಶರೀಯತ್‍ನಲ್ಲಿ ಯಾರೂ ಸಹ ಮೂಗು ತೂರಿಸುದನ್ನು ನಾವು ಸಹಿಸುವುದಿಲ್ಲ. ಇದರ ವಿರುದ್ಧ ನಮ್ಮ ಸಂಘಟನೆಯ 7.5 ಕೋಟಿ ಮಹಿಳೆಯರ ಸಹಿ ಸಂಗ್ರಹಕ್ಕೆ ಮುಂದಾಗಿದ್ದು ಕ್ರಮ ಜಾರಿಯಲ್ಲಿದೆ. ಸುಪ್ರಿಮ್ ಕೋರ್ಟ್ ಆದೇಶವು ನಮಗೂ ಕೂಡಾ ಅನ್ವಯವಾಗುತ್ತದೆ. ನಾವು ಕೂಡಾ ಭಾರತದಲ್ಲಿದ್ದೇವೆ ಇಲ್ಲಿನ ಪ್ರಜೆಗಳಾಗಿದ್ದೇವೆ. ಟ್ರಿಪ್ಪಲ್ ತಲಾಖ್ ಜ್ಯಾರಿಯಲ್ಲಿಲ್ಲ ಹೀಗಿರುವಾಗ ಕೇಂದ್ರ ಸರಕಾರ ತರಲು ಹೊರಟಿರುವ ಬಿಲ್ ಅಗತ್ಯ ಇತ್ತೇ ಎನ್ನುವ ಅವರು ಸುಪ್ರಿಮ್ ಕೋರ್ಟಿಗೆ ಹೋದ ಮಹಿಳೆಯರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ನೋಡಿದರೆ ಇದರ ಗೂಡಾರ್ಥ ಅರಿವಾಗುತ್ತದೆ ಎಂದರು. ಇದು ಕೇವಲ ಭಾರತದಲ್ಲಿ ಮುಸ್ಲಿಂರನ್ನು ಸಂಕಷ್ಟಕ್ಕೆ ಸಿಲುಕಿಸುವುದಾಗಿದೆ. ದೇಶದಲ್ಲಿ ಗೋ ರಕ್ಷಕರ ಹೆಸರಿನಲ್ಲಿ ಅನೇಕ ಗಲಭೆಗಳಾಗಿವೆ, ಕೊಲೆಗಳಾಗಿವೆ ಆದರೆ ಆ ಕುರಿತು ಯಾರೂ ಕೂಡಾ ಮಾತನಾಡುವವರಿಲ್ಲ ಎಂದರು.
ಮುಸ್ಲಿಮ್ ಮಹಿಳೆಯರಲ್ಲಿ ಷರಿಯತ್ ಕುರಿತಂತೆ ಅರಿವು ಮೂಡಿಸಲು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಏನು ಕ್ರಮ ವಹಿಸಿದೆ ಎಂದು ಕೇಳಿದ ಪ್ರಶ್ನೆಗೆ, ಷರಿಯತ್ ಅರಿವಿಗಾಗಿ ದೇಶದ ಹಲವು ಕಡೆಗಳಲ್ಲಿ ಮಹಿಳೆಯರ ಸಮಾವೇಶಗಳನ್ನು ನಡೆಸಲಾಗಿದೆ. ಮೊಹಲ್ಲಾ ಕಮಿಟಿಗಳನ್ನು ಮಾಡುವುದರ ಮೂಲಕ ಮಹಿಳೆಯರಲ್ಲಿ ತ್ರವಳಿ ತಲಾಖ್ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಲ್ಲದೆ ಮೊಹಲ್ಲಾ ಕಮಿಟಿಗಳಲ್ಲಿ ಈ ಕುರಿತು ಸಭೆಗಳನ್ನು ಆಯೋಜಿಸಲಾಗುತ್ತಿದೆ. ಒಂದು ಚಿಕ್ಕ ಹಳ್ಳಿಯನ್ನು ಬಿಡದೆ ಈ ಕಾರ್ಯ ನಿರತಂತರವಾಗಿ ನಡೆಯುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ ಭಟ್ಕಳದ ಮಹಿಳಾ ಸಂಚಾಲಕಿ ನಬಿರಾ ಮೊಹತೆಶಮ್ ಹಾಗೂ ಝರೀನಾ ಕೋಲಾ ಉಪಸ್ಥಿತರಿದ್ದರು.