ಮೂಡುಬಿದಿರೆ: ಮಾಜಿ ಪುರಸಭಾಧ್ಯಕ್ಷ ರತ್ನಾಕರ ದೇವಾಡಿಗ ನಿಧನ
ಮೂಡುಬಿದಿರೆ, ಜ. 7: ಪುರಸಭೆಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಉದ್ಯಮಿ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ರತ್ನಾಕರ ದೇವಾಡಿಗ (53) ಸೋಮವಾರ ನಿಧನರಾದರು. ಅನಾರೋಗ್ಯ ಪೀಡಿತರಾಗಿ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಈ ಹಿಂದೆ ಎರಡು ಅವಧಿ ಸೇರಿದಂತೆ ಪ್ರಸ್ತುತ ಪುರಸಭಾ ಸದಸ್ಯರಾಗಿದ್ದ ರತ್ನಾಕರ ದೇವಾಡಿಗ 2010ರಲ್ಲಿ ಪುರಸಭಾ ಅಧ್ಯಕ್ಷರಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಸೇರಿದಂತೆ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣ, ಸ್ವಚ್ಛ ಮೂಡುಬಿದಿರೆ, ಸ್ವಚ್ಛತಾ ಆಂದೋಲನದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು.
ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ವೃತ್ತಿಯಲ್ಲಿ ಮನೀಶ್ ಬಿಲ್ಡರ್ಸ್ ಮೂಲಕ ಬಿಲ್ಡಿಂಗ್ ಕಾಂಟ್ರಾಕ್ಟರ್, ಟ್ರಾವೆಲ್ ಏಜೆನ್ಸಿ ಹೊಂದಿದ್ದ ಅವರು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಭ್ರಷ್ಟಾಚಾರ ನಿರ್ಮೂಲನ ಸಮಿತಿ, ಮಾನವ ಹಕ್ಕು ಆಯೋಗ , ರೋಟರಿ ಕ್ಲಬ್ ಮೊದಲಾದ ಸಂಘಟನೆಗಳಲ್ಲಿಯೂ ತೊಡಗಿಕೊಂಡಿದ್ದರು. ತಮ್ಮ ಸೌಜನ್ಯ,ಸಜ್ಜನಿಕೆಯ ಸ್ನೇಹಮಯಿ ವ್ಯಕ್ತಿತ್ವ ದಿಂದಾಗಿ ಜನಾನುರಾಗಿಯಾಗಿದ್ದರು. ಪುಚ್ಚೇರಿಕಟ್ಟೆಯ ಕಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ದಶಕಗಳಿಂದ ಅವರು ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳು ಸೇರಿದಂತೆ ಎಲ್ಲ ಸೌಲಭ್ಯ ದೊರಕಿಸುವಲ್ಲಿ ಉದಾರ ದಾನಿಯಾಗಿದ್ದರು.
ಮಾಜಿ ಮುಖ್ಯಮಂತ್ರಿ ಮೂಡುಬಿದಿರೆಯ ಎಂ ವಿರಪ್ಪ ಮೊಯಿಲಿಯವರ ಕುಟುಂಬ ಸಂಬಂಧಿಯಾಗಿದ್ದ ರತ್ನಾಕರ ದೇವಾಡಿಗ ನಿಧನಕ್ಕೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಎಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸಂಜೆ ರತ್ನಾಕರ್ ಅವರ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.