ಸಮುದಾಯದ ಹಿತ ಕಾಪಾಡುವ ಸಾಂಘಿಕ ಪ್ರಯತ್ನಗಳಿಂದ ಸಾರ್ಥಕತೆ : ಅಹ್ಮದ್ ಶರೀಫ್ ಸಅದಿ
ಕಾರ್ಕಳ, ಜ. 8: ‘ಶಿಸ್ತು ಮತ್ತು ಸಂಯಮದ ವ್ಯಕ್ತಿತ್ವದಿಂದ ಯುವಕರು ಸಮಾಜದ ಆಸ್ತಿಯಾಗಬಲ್ಲರು. ಧಾರ್ಮಿಕ ಶ್ರದ್ಧೆ, ನಂಬಿಕೆಗಳ ಆಚರಣೆಯ ಜೊತೆಗೆ ಸಮುದಾಯದ ಹಿತ ಕಾಪಾಡುವ ಕಾರ್ಯವನ್ನು ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ನಡೆಸಿದಲ್ಲಿ ಸಾಂಘಿಕ ಪ್ರಯತ್ನಗಳು ಸಾರ್ಥಕಗೊಳ್ಳುತ್ತದೆ’ ಎಂದು ಕಾರ್ಕಳ ಸರ್‍ಹಿಂದ್ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕಿಲ್ಲೂರು ಹೇಳಿದರು.
ಅವರು ಕಾರ್ಕಳ ಬಂಗ್ಲೆಗುಡ್ಡೆಯ ತ್ವೈಬಾ ಗಾರ್ಡನ್ ಎಜುಕೇಷನಲ್ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದ್ದ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‍ನ ಕಾರ್ಕಳ ಡಿವಿಷನ್ ಇದರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೊಸ್ಮಾರು ಶೈಖ್ ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಎಂ.ಎಚ್. ಸುಲೈಮಾನ್ ಸಅದಿ ಅಲ್ ಅಫ್ಳಲಿ ದುಆ ನೆರವೇರಿಸಿದರು. ನಿಟ್ಟೆ ಅಬ್ದುರ್ರಝಾಕ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಹುಸೈನ್ ಸಅದಿ ಹೊಸ್ಮಾರು ಉದ್ಘಾಟಿಸಿದರು. ವೀಕ್ಷಕರಾಗಿ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಶಬ್ಬೀರ್ ಸಖಾಫಿ, ಮುಹಿಯ್ಯಿದ್ದೀನ್ ಸಖಾಫಿ ಪಯ್ಯಾರ್, ಅಬ್ದುರ್ರಹ್ಮಾನ್ ಅಮ್ಜದಿ ಕಂಪಾನ್ ಉಪಸ್ಥಿತರಿದ್ದರು.
ಮಾಧ್ಯಮ ಕಾರ್ಯನಿರ್ವಹಣೆ ಮಾಹಿತಿಯನ್ನು ಪತ್ರಕರ್ತ ಹಾರಿಸ್ ಹೊಸ್ಮಾರ್ ನೀಡಿದರು. ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹೊಸ್ಮಾರ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ. ಅಬ್ದುರ್ರಹೀಮ್ ನಿರೂಪಿಸಿದರು. ಹಾರಿಸ್ ಮಾಸ್ಟರ್ ಹೊಸ್ಮಾರು ವಂದಿಸಿದರು.