ಭಾರತ್ ಬಂದ್: ಕಾಸರಗೋಡಿನಲ್ಲಿ ಮಿಶ್ರ ಪ್ರತಿಕ್ರಿಯೆ

Update: 2019-01-08 07:16 GMT

ಕಾಸರಗೋಡು, ಜ. 8 : ರಾಷ್ಟ್ರಿಯ ಮುಷ್ಕರ ಕಾಸರಗೋಡಿನಲ್ಲಿ  ಜನಸಾಮಾನ್ಯರಿಗೆ ಬಿಸಿ ತಟ್ಟಿದೆ. ಖಾಸಗಿ - ಸರಕಾರಿ  ಬಸ್ಸುಗಳು ರಸ್ತೆಗಿಳಿದಿಲ್ಲ.  ಅಂಗಡಿ ಮುಂಗಟ್ಟುಗಳು  ಬಹುತೇಕ ತೆರೆದಿವೆ. ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ. ಬಸ್ಸು ಸೌಲಭ್ಯಗಳಿಲ್ಲದೆ ದೈನಂದಿನ ಪ್ರಯಾಣಿಕರು , ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ.

ಕೆಲ ಶಾಲೆಗಳಿಗೂ ಇಂದು ರಜೆ ನೀಡಲಾಗಿದೆ.  ಸರಕಾರಿ  ಕಚೇರಿಗಳು  ಬಿಕೋ ಎನ್ನುತ್ತಿವೆ . ನಗರ  ಪ್ರದೇಶಗಳಲ್ಲಿ  ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ,  ವಾಹನ ಸಂಚಾರ ವಿರಳವಾಗಿದೆ . ನಗರದ ಕೆಲವೆಡೆ  ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ  ವಾಹನ ಸಂಚಾರ ಎಂದಿನಂತಿದೆ.

ದಿನಗಳ ಹಿಂದೆ ಹರತಾಳ ಹಾಗೂ  ಹಿಂಸಾಚಾರ ನಡೆದ ಹಿನ್ನಲೆಯಲ್ಲಿ ಬಲವಂತದ  ಬಂದ್ ನಡೆಸದಂತೆ  ಕಾರ್ಮಿಕ ಸಂಘಟನೆಗಳ ಮುಖಂಡರು ಕರೆ ನೀಡಿದ್ದು , ಸ್ವಯಂ ಪ್ರೇರಿತವಾಗಿ ಮುಷ್ಕರದಲ್ಲಿ  ಪಾಲ್ಗೊಳ್ಳುವಂತೆ   ಕರೆ  ನೀಡಿವೆ.  ಆದರೆ ನಗರ ಪ್ರದೇಶಗಳಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಅಹಿತಕರ  ಘಟನೆ ನಡೆಯದಂತೆ ಪೊಲೀಸರು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಬಿಎಂಎಸ್  ಹೊರತುಪಡಿಸಿ ಉಳಿದ ಎಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ. ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು . ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News