ಚಲಿಸುತ್ತಿದ್ದ ರೈಲಿನಲ್ಲಿ ಬಿಜೆಪಿ ಮಾಜಿ ಶಾಸಕನ ಗುಂಡಿಕ್ಕಿ ಹತ್ಯೆ

Update: 2019-01-08 07:33 GMT

ಅಹ್ಮದಾಬಾದ್, ಜ. 8 : ಹಿರಿಯ ಬಿಜೆಪಿ ನಾಯಕ ಹಾಗೂ ಗುಜರಾತ್ ರಾಜ್ಯದ ಅಬ್ದಸಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ (53) ಅವರನ್ನು ಭುಜ್ ನಗರದಿಂದ ಅಹ್ಮದಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ರೈಲಿಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಭಾನುಶಾಲಿ ಅವರು ಪಯಣಿಸುತ್ತಿದ್ದ ರೈಲು  ಕಟಾರಿಯಾ ಮತ್ತು ಸುರ್ಜಾಬರಿ ನಿಲ್ದಾಣಗಳ ನಡುವಿದ್ದಾಗ ಈ ಘಟನೆ ನಡೆದಿದ್ದು ದುಷ್ಕರ್ಮಿಗಳು ಅವರ ಕಣ್ಣು ಮತ್ತು ಎದೆಗೆ ಗುರಿಯಾಗಿಸಿ ಗುಂಡು ಹೊಡೆದಿದ್ದಾರೆ.

ಘಟನೆ ನಡೆದ ನಂತರ ರೈಲನ್ನು ಅಹ್ಮದಾಬಾದ್ ನ ಕಲುಪುರ್ ನಿಲ್ದಾಣಕ್ಕೆ ತಂದು ಘಟನೆ ನಡೆದ ಬೋಗಿಯನ್ನು ರೈಲಿನಿಂದ ಬೇರ್ಪಡಿಸಲಾಯಿತು. ರೈಲಿನ ಬೋಗಿಯಲ್ಲಿ ಕೆಲವು ಖಾಲಿ ಬುಲೆಟ್ ಕೇಸುಗಳು ಪತ್ತೆಯಾಗಿದ್ದು ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

ಭಾನುಶಾಲಿ ಅವರು 2007-2012ರ ಅವಧಿಯಲ್ಲಿ ಶಾಸಕರಾಗಿದ್ದರು. ಕಳೆದ ವರ್ಷ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾದ ನಂತರ ಅವರು ಆರೋಪ ನಿರಾಕರಿಸಿದ್ದರೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಾಗಿ ಬಂದಿತ್ತು.  ಅವರ ವಿರುದ್ಧ ದೂರು ನೀಡಿದ್ದ ಮಹಿಳೆ ದೂರು ವಾಪಸ್ ಪಡೆದುಕೊಂಡ ನಂತರ ಆಗಸ್ಟ್ 2018ರಲ್ಲಿ ಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News