×
Ad

ಮೂರು ವರ್ಷಗಳಲ್ಲಿ 334 ಸೈನಿಕರ ಆತ್ಮಹತ್ಯೆ

Update: 2019-01-08 13:34 IST

ಹೊಸದಿಲ್ಲಿ, ಜ. 8: ಕಳೆದ ಮೂರು ವರ್ಷಗಳಲ್ಲಿ ದೇಶದ ಸೇನೆ, ನೌಕಾದಳ ಮತ್ತು ವಾಯುದಳದಲ್ಲಿ 334 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಲಾಗಿದೆ.

ಕಳೆದ ವರ್ಷ ಭಾರತದ ರಕ್ಷಣಾ ಪಡೆಗಳು 104 ಸಿಬ್ಬಂದಿಗಳನ್ನು ಆತ್ಮಹತ್ಯೆಗಳಿಂದ ಕಳೆದುಕೊಂಡಿದ್ದರೆ, 2017ರಲ್ಲಿ ಆತ್ಮಹತ್ಯೆಗಳ ಸಂಖ್ಯೆ 101 ಆಗಿತ್ತು. 2016ರಲ್ಲಿ 129 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ರಕ್ಷಣಾ ಖಾತೆಯ ಸಹಾಯಕ ಸಚಿವ ಸುಭಾಷ್ ಭಮ್ರೆ ತಮ್ಮ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ರಕ್ಷಣಾ ಪಡೆಗಳಲ್ಲಿ ಐದು ಭ್ರಾತೃಹತ್ಯೆ  ಪ್ರಕರಣಗಳೂ ನಡೆದಿವೆ ಎಂದು ಸಚಿವರು ತಿಳಿಸಿದ್ದಾರೆ.

ದೇಶದ ಭದ್ರತಾ ಪಡೆಗಳ ಸಿಬ್ಬಂದಿ ಆರೋಗ್ಯಕರ ವಾತಾವರಣದಲ್ಲಿರುವಂತಾಗಲು ಸರಕಾರ ಸಕಲ ಕ್ರಮಗಳನ್ನು ಕೈಗೊಂಡಿದೆ. ಸಿಬ್ಬಂದಿಗೆ ಉತ್ತಮ ಬಟ್ಟೆಬರೆ, ಆಹಾರ, ಪ್ರಯಾಣ ಸೌಕರ್ಯ, ಶಿಕ್ಷಣ, ಮನರಂಜನೆ, ವಿವಾಹಿತರಿಗೆ ಸೂಕ್ತ ವಸತಿ ಸೌಲಭ್ಯ ಮುಂತಾದವುಗಳನ್ನು ನೀಡಲಾಗುತ್ತಿದೆ,  ನಿಯಮಿತವಾಗಿ ಅವರ ಹಿತರಕ್ಷಣೆಗಾಗಿ ಸಭೆಗಳನ್ನೂ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸೂಕ್ತ ತರಬೇತುದಾರರ ಮೂಲಕ ರಕ್ಷಣಾ ಪಡೆಗಳ ಸಿಬ್ಬಂದಿಗೆ ಯೋಗ ಮತ್ತು ಧ್ಯಾನದಲ್ಲಿ ತರಬೇತಿ ನೀಡಲಾಗುತ್ತಿದೆ. ಸೇನೆಯ ಉತ್ತರ ಮತ್ತು ಪೂರ್ವ ಕಮಾಂಡ್ ಗಳಲ್ಲಿ ಮಿಲಾಪ್ ಮತ್ತು ಸಹಯೋಗ್ ಯೋಜನೆಗಳ ಹೊರತಾಗಿ  ಸೇನೆ ಮತ್ತು ವಾಯುಸೇನೆ ಮಾನಸಿಕ್ ಸಹಾಯತಾ ಸಹಾಯವಾಣಿಯನ್ನೂ ನಡೆಸುತ್ತಿದ್ದು ಅಗತ್ಯವಿದ್ದವರಿಗೆ ಕೌನ್ಸಲಿಂಗ್ ಒದಗಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News