“ನಮ್ಮದು ಕ್ಯಾಶ್ ಲೆಸ್ ಅರ್ಥವ್ಯವಸ್ಥೆ, ಹೀಗಿರುವಾಗ ಎಚ್ಎಎಲ್ ಗೆ ಕ್ಯಾಶ್ ಯಾಕೆ ಬೇಕು?”

Update: 2019-01-08 10:42 GMT

ಹೊಸದಿಲ್ಲಿ, ಜ.8: “ನಾವು ಕ್ಯಾಶ್ ಲೆಸ್ ಅರ್ಥವ್ಯವಸ್ಥೆಯ ಜನರು, ಹಾಗಿರುವಾಗ ನಿಮಗೇಕೆ ಕೈಯ್ಯಲ್ಲಿ ಕ್ಯಾಶ್ ಬೇಕು?'' ಇಂತಹ ಒಂದು ವಿಚಿತ್ರ ಹೇಳಿಕೆ ಬಂದಿದ್ದು ಬಿಜೆಪಿ ವಕ್ತಾರ ಶಾಹ್ ನವಾಝ್ ಹುಸೈನ್ ಅವರಿಂದ.

‘ಆಜ್ ತಕ್’ ಟಿವಿ ವಾಹಿನಿಯಲ್ಲಿ  ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರನ ಈ ಹೇಳಿಕೆಗೆ ಚರ್ಚೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ತಮ್ಮ ಕೈಯನ್ನು ಹಣೆಗೆ ಚಚ್ಚಿದರೆ, ಇನ್ನೊಬ್ಬ ರಾಜಕೀಯ ವಿಶ್ಲೇಷಕ `ಪ್ರೈಸ್ ಲೆಸ್' ಎಂದು ಪ್ರತಿಕ್ರಿಯಿಸಿದರು.

ಆದರೆ ಬಿಜೆಪಿ ವಕ್ತಾರ ಮಾತ್ರ ಮೇಲಿನ ಹೇಳಿಕೆಯನ್ನು ತಮಾಷೆಗೆಂದು ಹೇಳಿರಲಿಲ್ಲವೆಂಬುದಂತೂ ಸ್ಪಷ್ಟ.  “ನಮ್ಮ ಕೈಯಲ್ಲಿರುವ ಕ್ಯಾಶ್ ನೆಗೆಟಿವ್ ಆಗಿದೆ. ನಾವು  ಓವರ್ ಡ್ರಾಫ್ಟ್ ಮುಖಾಂತರ ರೂ 1,000 ಕೋಟಿ ಪಡೆಯಬೇಕಾಯಿತು'' ಎಂದು ಎಚ್‍ಎಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯ ಬಗ್ಗೆ ಕಾರ್ಯಕ್ರಮ ನಿರೂಪಕರು ಕೇಳಿದ ಪ್ರಶ್ನೆಗೆ ಬಿಜೆಪಿ ವಕ್ತಾರ ಮೇಲಿನಂತೆ ಉತ್ತರಿಸಿದ್ದರು.

ಆಗ ನಿರೂಪಕರು ಅವರು ತಮಾಷೆ ಮಾಡುತ್ತಿದ್ದಾರೆಂದು ಅಂದುಕೊಂಡು ಗಂಭೀರ ಚರ್ಚೆ ನಡೆಯುತ್ತಿದೆ ಎಂದು ನೆನಪಿಸಿದಾಗ, ಹುಸೈನ್ ``ಹೌದು, ಇದು ಗಂಭೀರ ಚರ್ಚೆ, ನಿಮಗೇನು ಬೇಕು, ನಿಮಗೆ ಕೈಯಲ್ಲಿ ಕ್ಯಾಶ್ ಬೇಕೇ,'' ಎಂದು ಪ್ರಶ್ನಿಸಿದರು.

ಎಚ್ ಎಎಲ್ ಮುಖ್ಯಸ್ಥರು ತಮ್ಮ ಸಿಬ್ಬಂದಿಗೆ ವೇತನ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆಂದು ನಿರೂಪಕರು ವಿವರಿಸಿದರು. ನಂತರ ಮತ್ತೆ ಮಾತನಾಡಿದ ಹುಸೈನ್ ``ಈಗಿನ ದಿನಗಳಲ್ಲಿ ಕೈಯ್ಯಲ್ಲಿ ಕ್ಯಾಶ್ ಇರುವುದಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News