ಎನ್‍ಇಟಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಗೆ ನಿಷೇಧವಿರಲಿಲ್ಲ: ಗೋವಾದ ಹಿರಿಯ ಅಧಿಕಾರಿ
ಪಣಜಿ, ಜ. 8: ಹಿಜಾಬ್ ತೆಗೆಯಲು ನಿರಾಕರಿಸಿದ ಕಾರಣ ಕಳೆದ ತಿಂಗಳು ನಡೆದ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ ಗೆ ಹಾಜರಾಗಲು ತನಗೆ ಅನುಮತಿ ನೀಡಲಾಗಿರಲಿಲ್ಲ ಎಂದು 24 ವರ್ಷದ ಸಫೀನಾ ಖಾನ್ ಸೌದಾಗರ್ ಎಂಬ ಯುವತಿ ಆರೋಪಿಸಿದ್ದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಗೋವಾ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರಸಾದ್ ಲೋಲೇನ್ಕರ್, ಪರೀಕ್ಷೆಗೆ ಯಾವುದೇ ನಿರ್ದಿಷ್ಟ ವಸ್ತ್ರ ಸಂಹಿತೆ ಸೂಚಿಸಿರಲಿಲ್ಲ ಎಂದಿದ್ದಾರೆ. ಪರೀಕ್ಷೆ ಡಿಸೆಂಬರ್ 18ರಂದು ನಡೆದಿತ್ತು.
''ಯುವತಿಗೆ ಪರೀಕ್ಷೆ ಬರೆಯಲು ಅನುಮತಿಸಬೇಕಿತ್ತು'' ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಗೆ ಬರೆದ ಪತ್ರದಲ್ಲಿ ಲೋಲೇನ್ಕರ್ ಹೇಳಿದ್ದಾರೆ.
'ಹಿಜಾಬ್ ಬಗ್ಗೆ ಅಥವಾ ಯಾವುದೇ ಇತರ ಉಡುಗೆಯ ಬಗ್ಗೆ ಯಾವುದೇ ನಿಯಂತ್ರಣಾ ಕ್ರಮಗಳನ್ನು ಸೂಚಿಸಿರಲಿಲ್ಲ. ಯಾವುದೇ ಕಾರಣಕ್ಕಾದರೂ ಹಿಜಾಬ್ ಅನುಮತಿಸಲಾಗದು ಎಂದಿದ್ದರೆ ಪರೀಕ್ಷೆಯ ಸೂಚನೆಗಳಲ್ಲಿ ಅದನ್ನು ಸ್ಪಷ್ಟವಾಗಿ ನಮೂದಿಸಬೇಕು'' ಎಂದೂ ಅವರು ತಿಳಿಸಿದ್ದಾರೆ.
ಪರೀಕ್ಷೆ ಬರೆಯಲು ಸಾಧ್ಯವಾಗದ ನಂತರ ಸೌದಾಗರ್ ಗೋವಾ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರಿದ್ದರಲ್ಲದೆ, ಲೊಲೇನ್ಕರ್ ಅವರಿಗೂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು.