ಶಬರಿಮಲೆ ವಿವಾದ: ವಾವರ್ ಮಸೀದಿ ಪ್ರವೇಶಿಸಲು ಮುಂದಾಗಿದ್ದ ಸಂಘಪರಿವಾರದ ಮೂವರು ಮಹಿಳೆಯರ ಬಂಧನ
ತಿರುವನಂತಪುರಂ, ಜ.8: ಶಬರಿಮಲೆ ಸಮೀಪವಿರುವ ವಾವರ್ ಮಸೀದಿಗೆ ಪ್ರವೇಶಿಸಲೆಂದು ಆಗಮಿಸಿದ್ದ ಮೂವರು ತಮಿಳುನಾಡಿನ ಮಹಿಳೆಯರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ತಿರುಪ್ಪುರ್ ನ ರೇವತಿ, ಸುಶೀಲಾ ದೇವಿ ಹಾಗೂ ತಿರುನಲ್ವೇಲಿಯ ಗಾಂಧಿಮತಿ ಬಂಧಿತ ಮಹಿಳೆಯರು. ಈ ಮೂವರು ‘ಹಿಂದು ಮಕ್ಕಳ್ ಕಚ್ಚಿ’ಗೆ ಸೇರಿದವರೆಂದು ಹೇಳಲಾಗಿದೆ. ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದಾದರೆ ತಾವು ವಾವರ್ ಮಸೀದಿಯನ್ನು ಪ್ರವೇಶಿಸುತ್ತೇವೆ, ತಮಗೆ ಅನುಮತಿ ನೀಡಬೇಕು ಎಂದು ಈ ಮೂವರು ಮಹಿಳೆಯರು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದರು.
ಈ ಮೂವರು ಮಹಿಳೆಯರ ಜತೆಗಿದ್ದ ಅವರ ಸಂಘಟನೆಯ ಮೂವರು ಪುರುಷರು ಹಾಗೂ ಅವರ ವಾಹನ ಚಾಲಕನನ್ನೂ ಬಂಧಿಸಲಾಗಿದೆ. ಅವರು ಮತೀಯ ಉದ್ವಿಗ್ನತೆ ಸೃಷ್ಟಿಸುವ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ಆರೋಪಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಅವರ ಆಗಮನದ ಸುಳಿವು ಪಡೆದ ಪೊಲೀಸರು ಪಾಲಕ್ಕಾಡಿನ ವೇಲಾ ಥವಳಂ ಚೆಕ್ ಪೋಸ್ಟಿನಲ್ಲಿ ಬಂಧಿಸಿದ್ದರು.
ಶಬರಿಮಲೆ ದೇಗುಲಕ್ಕೆ ತೆರಳುವವರು ವಾವರ್ ಮಸೀದಿಗೂ ಭೇಟಿ ನೀಡುತ್ತಾರೆ. ಮಸೀದಿಯ ಮುಖ್ಯ ಪ್ರಾರ್ಥನಾ ಸ್ಥಳಕ್ಕೆ ಪುರುಷರು ಮತ್ತು ಮಹಿಳೆಯರಿಗೂ ಪ್ರವೇಶವಿಲ್ಲವಾಗಿದ್ದು, ಭಕ್ತರು ಸಾಮಾನ್ಯವಾಗಿ ಮಸೀದಿ ಕಟ್ಟಡದ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆದರೆ ಈ ಮಹಿಳೆಯರು ತಾವು ಮಸೀದಿಯ ಪ್ರಾರ್ಥನಾ ಸ್ಥಳಕ್ಕೆ ಪ್ರವೇಶಿಸುವುದಾಗಿ ಹೇಳಿದ್ದರೆನ್ನಲಾಗಿದೆ.