×
Ad

​ಬ್ಯಾಂಕ್ ವಿಲೀನ ಬಳಿಕ ವಿಜಯ ಬ್ಯಾಂಕ್ ಹೆಸರಿಡಲಿ: ಹರೀಶ್‌ಕುಮಾರ್

Update: 2019-01-08 17:32 IST

ಮಂಗಳೂರು, ಜ.8: ಕರಾವಳಿ ಮೂಲದ ವಿಜಯ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡ ಜೊತೆಗೆ ವಿಲೀನಗೊಳಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಖಂಡಿಸಿದ ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ಕುಮಾರ್, ಬ್ಯಾಂಕ್ ವಿಲೀನದ ಬಳಿಕ ವಿಜಯ ಬ್ಯಾಂಕ್ ಎಂದು ಹೆಸರಿಡಲು ಆಗ್ರಹಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡಾ ಗಾತ್ರದಲ್ಲಿ ಬೃಹತ್ ಮಟ್ಟದಲ್ಲಿದ್ದರೂ ನಷ್ಟದಲ್ಲಿದೆ. ಆದರೆ ವಿಜಯ ಬ್ಯಾಂಕ್ ಗಾತ್ರದಲ್ಲಿ ಚಿಕ್ಕದಿದ್ದರೂ ಲಾಭದಲ್ಲಿದೆ. ಹಾಗಾಗಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಜಯ ಬ್ಯಾಂಕ್ ಎಂದು ಹೆಸರಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಪ್ರತಿಷ್ಠಿತ ವಿಜಯ ಬ್ಯಾಂಕ್‌ನ್ನು ಬಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಆದರೆ ವಿಜಯ ಬ್ಯಾಂಕ್ ನೌಕರರು ವಿಲೀನ ಮಾಡಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ಆದರೂ ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದೇ ಜ.10ರಂದು ಜಿಲ್ಲೆಯಲ್ಲಿ ಇರುವಂತಹ ವಿಜಯ ಬ್ಯಾಂಕ್ ಬ್ರಾಂಚ್‌ಗಳ ಮುಂಭಾಗ ಕಾಂಗ್ರೆಸ್ ಪಕ್ಷದಿಂದ ಬೆಳಗ್ಗೆ 10ಗಂಟೆಗೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲೆಯ ಲಕ್ಷಾಂತರ ಯುವಕರು ಈ ಬ್ಯಾಂಕ್‌ನಲ್ಲಿ ಉದ್ಯೋಗ ಗಳಿಸಿದ್ದಾರೆ. ಲಕ್ಷಾಂತರ ಕುಟುಂಬಗಳು ಈ ಬ್ಯಾಂಕ್‌ನಿಂದಾಗಿ ನೆಲೆಯನ್ನು ಕಂಡುಕೊಂಡಿವೆ. ರೈತರು ಕೃಷಿ ಚಟುವಟಿಕೆಗಳಿಗಾಗಿ, ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಈ ಬ್ಯಾಂಕ್‌ನ ನೆರವು ಪಡೆದುಕೊಂಡಿದ್ದಾರೆ. ಆದರೆ ಈಗ ಕೇಂದ್ರ ಸರಕಾರ ಈ ಬ್ಯಾಂಕ್‌ನ್ನು ಬರೋಡಾ ಬ್ಯಾಂಕ್‌ನೊಂದಿಗೆ ವಿಲೀನ ಮಾಡುತ್ತಿರುವುದು ಸಲ್ಲದು ಎಂದರು.

ಇತ್ತೀಚೆಗೆ ಕೇಂದ್ರ ಸರಕಾರದ ಕ್ಯಾಬಿನೆಟ್ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿ ವಿಲೀನ ಪ್ರಕರಿಯೆ ಅಂಗೀಕಾರಗೊಂಡಿದೆ. ಲಾಭದಲ್ಲಿರುವ ಬ್ಯಾಂಕ್‌ನ್ನು ನಷ್ಟದಲ್ಲಿರುವ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹರೀಶ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News