ಬೋಟ್ ಮುಳುಗಡೆ: ಮೊಸಳೆಗಳಿದ್ದ ನದಿಗೆ ಧುಮುಕಿ 10 ಮಂದಿಯನ್ನು ರಕ್ಷಿಸಿದ ಸೋದರಿಯರು
Update: 2019-01-08 17:40 IST
ಭುಬನೇಶ್ವರ್, ಜ.8: ಮೊಸಳೆಗಳು ತುಂಬಿದ್ದ ನದಿಗೆ ತಮ್ಮ ಪ್ರಾಣದ ಹಂಗು ತೊರೆದು ಧುಮುಕಿದ ಇಬ್ಬರು ಸೋದರಿಯರು ಸುಮಾರು 10 ಜನರ ಜೀವ ಉಳಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ 2ರಂದು ಕೇಂದ್ರಪುರ ಜಿಲ್ಲೆಯ ಮಹಾಕಲಪಡ ಬ್ಲಾಕಿನಲ್ಲಿರುವ ನಿಪಾನಿಯಾ ಸಮೀಪ ಮಹಾನದಿಯಲ್ಲಿ ದೋಣಿಯೊಂದು ದುರಂತಕ್ಕೀಡಾಗಿರುವುದನ್ನು ಕಂಡ ಸೋದರಿಯರಾದ ಸಸ್ಮಿತಾ ಗಿರಿ ಹಾಗೂ ಪೂರ್ಣಿಮಾ ಗಿರಿ ನದಿಯಲ್ಲಿ ಮುಳುಗುತ್ತಿದ್ದವರ ಆರ್ತನಾದವನ್ನು ಕೇಳಿ ಜೀವದ ಹಂಗು ತೊರೆದು ನೀರಿಗೆ ಧುಮುಕಿದ್ದರು. ಅವರು ರಕ್ಷಿಸಿದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದರು. ಆದರೆ ಮುಳುಗುತ್ತಿದ್ದ ಎಲ್ಲರನ್ನೂ ರಕ್ಷಿಸಲು ತಮಗೆ ಅಸಾಧ್ಯವಾಗಿದ್ದಕ್ಕೆ ಸೋದರಿಯರು ವಿಷಾದ ವ್ಯಕ್ತಪಡಿಸಿದ್ದಾರೆ.
ಸೋದರಿಯರ ಸಾಹಸವನ್ನು ಊರಿಗೆ ಊರೇ ಕೊಂಡಾಡುತ್ತಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೂಡ ಅವರ ಸಾಹಸವನ್ನು ಶ್ಲಾಘಿಸಿದ್ದಾರೆ.