ಉಡುಪಿ ಜಿಲ್ಲೆಯಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ
ಉಡುಪಿ, ಜ.8: ಕೇಂದ್ರ ಸರಕಾರದ ರೈತ, ಕಾರ್ಮಿಕ, ಜನ ವಿರೋಧಿ ಮತ್ತು ದೇಶದ್ರೋಹಿ ನೀತಿಗಳನ್ನು ಖಂಡಿಸಿ ದೇಶದ 10 ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಮೊದಲ ದಿನವಾದ ಮಂಗಳವಾರ ಉಡುಪಿ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಾದ್ಯಂತ ಬೆಳಗ್ಗೆಯಿಂದ ಸರ್ವಿಸ್, ಸಿಟಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯದೆ ಬಂದ್ ನಡೆಸಿರುವುದರಿಂದ ಈ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿ, ಸರ್ವಿಸ್ ಹಾಗೂ ಸಿಟಿ ಬಸ್ ನಿಲ್ದಾಣಗಳು ಬಸ್‌ಗಳಿಲ್ಲದೆ ಬೀಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳಲ್ಲಿ ದೂರದ ಊರಿನಿಂದ ಆಗಮಿಸಿರುವ ಪ್ರಯಾ ಣಿಕರು ಬಸ್‌ಗಳಿಗಾಗಿ ಕಾಯುತ್ತಿುವ ದೃಶ್ಯಗಳು ಕಂಡುಬಂದವು.
ಬೆಳಗ್ಗೆ 8ಗಂಟೆಯವರೆಗೆ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾರ್ಕಳಕ್ಕೆ ಮೂರು, ಧರ್ಮಸ್ಥಳಕ್ಕೆ ಒಂದು ಹಾಗೂ ಮಂಗಳೂರು ಕಡೆ ಏಳು ಬಸ್‌ಗಳು ಹೊರಟಿದ್ದು, ಬಳಿಕ ಕಾರ್ಮಿಕ ಸಂಘಟನೆಯವರ ಮನವಿಯ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸ ಲಾಯಿತು. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿತ್ತು.
ಆದರೆ ಉಡುಪಿ ನಗರದಲ್ಲಿ ಬಹುತೇಕ ಅಂಗಡಿ, ವ್ಯಾಪಾರ ಮಳಿಗೆಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್, ಹೊಟೇಲ್‌ಗಳು ತೆರೆದಿದ್ದವು. ಮುಷ್ಕರದ ಹಿನ್ನೆಲೆಯಲ್ಲಿ ನಗರದಲ್ಲಿ ಜನ ಹಾಗೂ ವಾಹನಗಳ ಸಂಚಾರ ಸಾಕಷ್ಟು ಕಡಿಮೆ ಇತ್ತು. ಲಾರಿಗಳು ಬೆಳಗ್ಗೆಯಿಂದ ರಸ್ತೆಗೆ ಇಳಿಯದೆ ಮುಷ್ಕರ ನಡೆಸಿರುವು ದರಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದ್ವಿಚಕ್ರ ಹಾಗೂ ಲಘು ವಾಹನ ಹೊರತು ಪಡಿಸಿದರೆ ವಾಹನಗಳ ಸಂಖ್ಯೆ ವಿರಳವಾಗಿತ್ತು.
ಸರಕಾರಿ ಕಚೇರಿಗಳು, ಕೆಲವು ಬ್ಯಾಂಕ್‌ಗಳು ಎಂದಿನಂತೆ ತೆರೆದಿತ್ತು. ಆದರೆ ಬ್ಯಾಂಕ್‌ಗಳಲ್ಲಿ ಯಾವುದೇ ವ್ಯವಹಾರಗಳು ನಡೆದಿಲ್ಲ. ಕೆಲವು ಕಡೆ ಅಟೋ ಸಂಚಾರ ಎಂದಿನಂತೆ ಕಂಡುಬಂತು. ಸರಕಾರಿ ಕಚೇರಿಯಲ್ಲಿ ಜನರ ಸಂಖ್ಯೆ ವಿರಳವಾಗಿರುವುದು ಕಂಡುಬಂತು. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದು ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಕುಂದಾಪುರದಲ್ಲಿ ಉತ್ತಮ ಪ್ರತಿಕ್ರಿಯೆ: ಕುಂದಾಪುರ ತಾಲೂಕಿನಲ್ಲಿ ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕುಂದಾಪುರ ನಗರ ಸಂಪೂರ್ಣ ಬಂದ್ ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕುಂದಾಪುರ ನಗರದಲ್ಲಿ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಖಾಸಗಿ ಹಾಗೂ ಸರಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿತ್ತು. ಅಟೋಗಳು ರಸ್ತೆಗೆ ಇಳಿಯದೆ ಬೆಂಬಲ ಸೂಚಿಸಿದ್ದವು. ಎರಡು ಮೂರು ಹೊಟೇಲ್‌ಗಳು ಮಾತ್ರ ತೆರೆದಿದ್ದವು. ಪೇಟೆಯಲ್ಲಿ ಜನ ಸಂಚಾರ ಬಹಳ ವಿರಳವಾಗಿತ್ತು.
ಗಂಗೊಳ್ಳಿಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರಿದ್ದವು. ಬಸ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ತಲ್ಲೂರು, ಹೆಮ್ಮಾಡಿ, ಹಾಲಾಡಿ ಪೇಟೆಯಲ್ಲಿ ಬಂದ್‌ಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು. ಸಿಐಟಿಯು ವತಿಯಿಂದ ಆಜ್ರಿಯ ಪೇಟೆಯಲ್ಲಿ ಪ್ರತಿಭಟನಾ ಜಾಥಾ ನಡೆ ಯಿತು. ನೇರಳಕಟ್ಟೆ, ಬೆಳ್ವೆ, ಗೋಳಿಯಂಗಡಿ ಭಾಗದಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾರ್ಕಳದಲ್ಲಿ ಭಾಗಶಃ ಬಂದ್: ಕಾರ್ಕಳದಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ಮಾರ್ಗವಾಗಿ ಬೆರಳಣಿಕೆಯ ಬಸ್‌ಗಳು ಓಡಾಟ ನಡೆಸಿದ್ದು, ಬಹುತೇಕ ಬಸ್‌ಗಳು ರಸ್ತೆಗೆ ಇಳಿಯದೆ ಬಂದ್ ಆಚರಿಸಿದವು.
ನಗರದಲ್ಲಿ ಅಂಗಡಿಮುಗ್ಗಟ್ಟುಗಳು ಬಹುತೇಕ ತೆರೆದಿರುವುದು ಕಂಡು ಬಂತು. ಮುಷ್ಕರದ ಪ್ರಯುಕ್ತ ಜಿಸಿಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಯ ವರು ಕಾರ್ಕಳ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಬಂಡಿ ಮಠದವರೆಗೆ ಪ್ರತಿಭಟನಾ ಮೆರಗಣಿಗೆ ನಡೆಸಲಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಕೆಎಸ್‌ಆರ್‌ಪಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿತ್ತು.
ಸಿಟಿ ಬಸ್ ನಿಲ್ದಾಣದಲ್ಲಿ ವಾಗ್ವಾದ
ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸುವಂತೆ ಕಾರ್ಮಿಕ ಸಂಘಟನೆಯಿಂದ ಬಸ್ ಚಾಲಕ, ನಿರ್ವಾಹಕರಿಗೆ ಮನವಿ ಮಾಡಲಾಯಿತು. ಈ ಸಂದರ್ಭ ಬಸ್ ಚಾಲಕರು ಮತ್ತು ಕಾರ್ಮಿಕ ಸಂಘಟನೆ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು.
ದುಪ್ಪಟ್ಟು ಬಾಡಿಗೆ ಪಡೆದು ಓಡಿಸುತ್ತಿರುವ ಅಟೋ ರಿಕ್ಷಾವನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ನಾವು ಕೂಡ ಬಸ್ ಸಂಚಾರ ಆರಂಭಿಸುತ್ತೇವೆ ಎಂದು ಬಸ್ ಚಾಲಕರು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘ ಟನೆಯವರು ಆಟೋ ಚಾಲಕರ ಮನವೊಲಿಕೆ ಮಾಡಿದರು. ಇದರಿಂದ ಸಿಟಿ ಬಸ್ ನಿಲ್ದಾಣದಲ್ಲಿ ಶೇ.70ರಷ್ಟು ಆಟೋ ಸಂಚಾರ ಸ್ಥಗಿತಗೊಂಡಿತು. ಅದೇ ರೀತಿ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಯಿತು.
ಅದೇ ರೀತಿ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಮಣಿಪಾಲದಲ್ಲಿ ಬಸ್ ತಡೆದು ನಿಲ್ಲಿಸಿದ್ದಕ್ಕೆ ಪ್ರತಿಭಟನಾ ನಿರತರು ಮತ್ತು ಬಸ್ ಮಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸಿದ ಬಗ್ಗೆ ವರದಿಯಾಗಿದೆ.
''ಕಾರ್ಮಿಕ ಸಂಘಟನೆ ಕರೆ ನೀಡಿರುವ ಮುಷ್ಕರ ಸ್ವಯಂ ಪ್ರೇರಿತ ಬಂದ್ ಆಗಿ ಪರಿಣಮಿಸಿರುವುದರಿಂದ ಸರಕಾರದ ನೀತಿಗಳ ಬಗ್ಗೆ ಜನರಿಗೆ ಅತೃಪ್ತಿ ಇದೆ ಎಂಬುದು ಸಾಬೀತುಪಡಿಸಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗಿರುವುದಕ್ಕೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ಆದರೆ ಜನ ಪ್ರತಿದಿನ ಅನು ಭವಿಸುವ ತೊಂದರೆ ವಿರುದ್ಧ ಈ ಹೋರಾಟ ನಡೆಸಲಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು. ಈ ಮುಷ್ಕರದಲ್ಲಿ ನಾಪತ್ತೆಯಾಗಿರುವ ಬೋಟು ಹಾಗೂ ಏಳು ಮಂದಿ ಮೀನುಗಾರರ ಶೀಘ್ರ ಪತ್ತೆಗಾಗಿಯೂ ಸರಕಾರವನ್ನು ಒತ್ತಾಯಿಸಲಾಗುವುದು''.
- ಬಾಲಕೃಷ್ಣ ಶೆಟ್ಟಿ, ಸಿಐಟಿಯು ಮುಖಂಡ, ಉಡುಪಿ
''ಉಡುಪಿ ಜಿಲ್ಲೆಯಾದ್ಯಂತ ಮುಷ್ಕರವು ಶಾಂತಿಯುತವಾಗಿ ನಡೆದಿದ್ದು, ಎಲ್ಲಿಯೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಜಿಲ್ಲೆಯಲ್ಲಿ ಎರಡು ಕೆಎಸ್‌ಆರ್‌ಪಿ ಹಾಗೂ ಏಳು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿತ್ತು. ಬುಧವಾರ ಕೂಡ ಭದ್ರತೆ ಮುಂದುವರೆಯಲಿದೆ''.
-ಲಕ್ಷ್ಮಣ್ ನಿಂಬರ್ಗಿ, ಪೊಲೀಸ್ ಅಧೀಕ್ಷಕ ಉಡುಪಿ ಜಿಲ್ಲೆ.