ಕೆಎಂಎಫ್‌ನಲ್ಲಿ ಲಂಚ ವಸೂಲಿ; ಡಾ.ಸಮೀರ್ ಪಾಷಾ ಆರೋಪ
ಬೆಂಗಳೂರು, ಜ.8: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯಲ್ಲಿ ತಾಂತ್ರಿಕ ನೌಕರರಿಗೆ ವೇತನ ಪರಿಷ್ಕರಣೆ ಮಾಡಿಕೊಡುವ ಭರವಸೆ ನೀಡಿ ತಲಾ 50 ಸಾವಿರ ರೂ.ಗಳನ್ನು ಲಂಚವಾಗಿ ವಸೂಲಿ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಡಾ.ಸಮೀರ್ ಪಾಷಾ ಆರೋಪಿಸಿದ್ದಾರೆ.
ಕೆಎಂಎಫ್ ವಿವಿಧ ಘಟಕಗಳಲ್ಲಿ ಐಟಿಐ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಆಧಾರದಲ್ಲಿ 270ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಐಟಿಐ ವಿದ್ಯಾರ್ಹತೆ ಆಧಾರದ ಮೇಲೆ ನೇಮಕವಾಗಿರುವ ತಾಂತ್ರಕ ಸಿಬ್ಬಂದಿ ವೇತನ ಶ್ರೇಣಿ ಪರಷ್ಕರಣೆ ಮಾಡಲಾಗಿದೆ. ಇದಕ್ಕೂ ಮುನ್ನ ನೌಕರರಿಂದ ಹಣ ವಸೂಲಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇತನ ಪರಿಷ್ಕರಣೆ ಸದ್ಯಕ್ಕೆ ಬೇಡ ಎಂದು ಸಹಕಾರ ಸಚಿವರು ಹೇಳಿದ್ದರೂ, ಕೆಎಂಎಫ್ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ. ವೇತನ ಪರಿಷ್ಕರಣೆ ಮಾಡುವ ಮೂಲಕ ಎಎಂಎಫ್‌ಗೆ ಅನಗತ್ಯ ಹೊರೆ ಹೊರಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ನೌಕರರ ಮೂಲ ವೇತನ ಹೆಚ್ಚಳ ಮಾಡಿದ್ದಲ್ಲಿ ಸದ್ಯ ದೊರೆಯುವ ವೇತನಕ್ಕಿಂತ ಎರಡು ಪಟ್ಟು ಜಾಸ್ತಿ ಹಣವು ಅನವಶ್ಯಕವಾಗಿ ಸರಕಾರದ ಬೊಕ್ಕಸದಿಂದ ಸೋರಿಕೆಯಾಗುತ್ತದೆ. ಇದರಿಂದ ಉತ್ತಮವಾಗಿ ನಡೆಯುತ್ತಿರುವ ಸಂಸ್ಥೆಯನ್ನು ನಷ್ಟಕ್ಕೆ ತಳ್ಳಿದಂತಾಗುತ್ತದೆ. ಹೀಗಾಗಿ, ಇದಕ್ಕೆ ಸೂಕ್ತವಾದ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.